ಗೋವಾ ಸರ್ಕಾರದ ಮಹತ್ವದ ನಿರ್ಧಾರ; 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕ್ಯಾಸಿನೋ ಪ್ರವೇಶ ನಿಷೇಧ

1 Min Read
1 Min Read

ಪಣಜಿ: ಗೋವಾ ಸರ್ಕಾರ ಕ್ಯಾಸಿನೋಗಳ ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದು, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕ್ಯಾಸಿನೋಗಳ ಗೇಮಿಂಗ್ ಪ್ರದೇಶಗಳಿಗೆ ಪ್ರವೇಶವನ್ನು ನಿಷೇಧಿಸಿದೆ.

ಈ ಕುರಿತು ಗೋವಾ ಗೃಹ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಹೊಸ ಅಧಿಸೂಚನೆಯ ಪ್ರಕಾರ, ಸಮುದ್ರದಲ್ಲಿರುವ (Offshore) ಕ್ಯಾಸಿನೋ ಹಡಗುಗಳ ಪರವಾನಗಿ ಶುಲ್ಕ ಪಾವತಿಗೆ ಸಂಬಂಧಿಸಿದ ನಿಯಮಗಳನ್ನೂ ಸರ್ಕಾರ ಬಿಗಿಗೊಳಿಸಿದೆ. ನಿಗದಿತ ಅವಧಿಯಲ್ಲಿ ವಾರ್ಷಿಕ ಪರವಾನಗಿ ಶುಲ್ಕ ಪಾವತಿಸದ ನಿರ್ವಾಹಕರು ಶೇ.18ರಷ್ಟು ದಂಡ ಪಾವತಿಸಬೇಕಾಗುತ್ತದೆ.

ಇದರ ಜೊತೆಗೆ, ಸಂಬಂಧಿತ ಕಾನೂನಿನಡಿ “ನಿಗದಿತ ಪ್ರದೇಶ” (Designated Area) ಎಂಬ ಪದದ ವ್ಯಾಖ್ಯಾನವನ್ನೂ ಪರಿಷ್ಕರಿಸಲಾಗಿದೆ.

ಯುವಜನರನ್ನು ಕ್ಯಾಸಿನೋಗಳಿಂದ ದೂರವಿಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸರ್ಕಾರ ಕ್ಯಾಸಿನೋ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ, ಗೇಮಿಂಗ್ ಪ್ರದೇಶಗಳಿಗೆ ಪ್ರವೇಶಿಸಲು ಅರ್ಹತಾ ಮಾನದಂಡಗಳನ್ನು ಕಠಿಣಗೊಳಿಸುವ ಮೂಲಕ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸಿದೆ.

Share This Article