ಜಮ್ಮು: ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ದೊಡ್ಡ ದುರಂತವೊಂದು ತಪ್ಪಿದೆ. 47 ಮಂದಿ ಯಾತ್ರಿಕರು, ಚಾಲಕ ಹಾಗೂ ನಿರ್ವಾಹಕರನ್ನು (ಕಂಡಕ್ಟರ್) ಸೇರಿಸಿ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಅಥವಾ ಗಾಯಗಳಾಗಿಲ್ಲ.
ರಾಜಸ್ಥಾನದ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಈ ಸ್ಲೀಪರ್ ಬಸ್ ಶ್ರೀನಗರದಿಂದ ಜಮ್ಮುವಿನತ್ತ ತೆರಳುತ್ತಿದ್ದ ವೇಳೆ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕರೂಲ್ (Karool) ಪ್ರದೇಶದ ಬಳಿ ಏಕಾಏಕಿ ಬೆಂಕಿ ಹೊತ್ತಿಕೊಂಡಿತು.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಜಮ್ಮು-ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್, ಭಾರತೀಯ ಸೇನೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಅಗ್ನಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು.
ಬೆಂಕಿ ಸಂಪೂರ್ಣವಾಗಿ ಬಸ್ ಅನ್ನು ಆವರಿಸುವ ಮುನ್ನವೇ ಅದರಲ್ಲಿದ್ದ ಎಲ್ಲ 47 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಕಾರ್ಯಾಚರಣೆಯ ವೇಳೆ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದ ಬಳಿಕ ಸಂಚಾರವನ್ನು ಪುನಃ ಆರಂಭಿಸಲಾಯಿತು.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


