ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 19ರಿಂದ ಮೊಲ್ಡೋವಾ, ಉತ್ತರ ಮ್ಯಾಸಿಡೋನಿಯಾ ಹಾಗೂ ರೊಮೇನಿಯಾ ದೇಶಗಳಿಗೆ ಮೂರು ರಾಷ್ಟ್ರಗಳ ಅಧಿಕೃತ (State Visit) ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರವಾಸವು ಪೂರ್ವ ಯುರೋಪ್ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
ಮೊಲ್ಡೋವಾ ಪ್ರವಾಸ
ಜುಲೈ 20ರಂದು ರಾಷ್ಟ್ರಪತಿ ಮುರ್ಮು ಅವರು ಮೊಲ್ಡೋವಾಗೆ ಭೇಟಿ ನೀಡಿ, ಅಲ್ಲಿನ ರಾಷ್ಟ್ರಪತಿ ಮಾಯಾ ಸಂಡು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಮೊಲ್ಡೋವಾ ಸಂಸತ್ತಿನ ಅಧ್ಯಕ್ಷ ಇಗೊರ್ ಗ್ರೋಸು ಅವರನ್ನು ಭೇಟಿಯಾಗಿ, ಮೊಲ್ಡೋವಾ-ಭಾರತ ಸಂಸದೀಯ ಸ್ನೇಹ ಬಳಗದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಇದೇ ವೇಳೆ, ಭಾರತ-ಮೊಲ್ಡೋವಾ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಭಾಷಣ ಮಾಡಲಿರುವ ರಾಷ್ಟ್ರಪತಿ, ಅಲ್ಲಿನ ಭಾರತೀಯ ಸಮುದಾಯದ ಸದಸ್ಯರೊಂದಿಗೂ ಸಂವಾದ ನಡೆಸಲಿದ್ದಾರೆ. ಮೊಲ್ಡೋವಾಕ್ಕೆ ಭಾರತೀಯ ರಾಷ್ಟ್ರಪತಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿ ಎಂಬುದು ವಿಶೇಷ.
ಉತ್ತರ ಮ್ಯಾಸಿಡೋನಿಯಾ ಭೇಟಿ
ಪ್ರವಾಸದ ಎರಡನೇ ಹಂತದಲ್ಲಿ, ಜುಲೈ 21ರಂದು ರಾಷ್ಟ್ರಪತಿ ಉತ್ತರ ಮ್ಯಾಸಿಡೋನಿಯಾಗೆ ತೆರಳಲಿದ್ದಾರೆ. ಈ ದೇಶಕ್ಕೂ ಭಾರತೀಯ ರಾಷ್ಟ್ರಪತಿಯ ಮೊದಲ ಅಧಿಕೃತ ಭೇಟಿ ಇದಾಗಿದೆ.
ಈ ವೇಳೆ ರಾಷ್ಟ್ರಪತಿ ಗೋರ್ಡಾನಾ ಸಿಲ್ಜಾನೋವ್ಸ್ಕಾ-ಡಾವ್ಕೋವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಪ್ರಧಾನಿ ಹ್ರಿಸ್ಟಿಜಾನ್ ಮಿಕ್‌ಕೋಸ್ಕಿ ಹಾಗೂ ಅಲ್ಲಿನ ಸಂಸತ್ತಿನ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಅಲ್ಲದೆ, ಉತ್ತರ ಮ್ಯಾಸಿಡೋನಿಯಾ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಭಾರತ-ಉತ್ತರ ಮ್ಯಾಸಿಡೋನಿಯಾ ವ್ಯಾಪಾರ ವೇದಿಕೆಯಲ್ಲೂ ಭಾಗವಹಿಸಲಿದ್ದಾರೆ.
ರೊಮೇನಿಯಾ ಪ್ರವಾಸ
ಪ್ರವಾಸದ ಅಂತಿಮ ಹಂತದಲ್ಲಿ, ಜುಲೈ 23ರಂದು ರಾಷ್ಟ್ರಪತಿ ರೊಮೇನಿಯಾಗೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಈ ಪ್ರವಾಸದ ವೇಳೆ ಅವರು ರೊಮೇನಿಯಾ ರಾಷ್ಟ್ರಪತಿ ನಿಕುಶೋರ್ ಡಾನ್, ಹಂಗಾಮಿ ಪ್ರಧಾನಿ ಇಲಿ ಬೊಲೊಜಾನ್, ಸೆನೆಟ್ ಅಧ್ಯಕ್ಷ ಮಿರ್ಸಿಯಾ ಅಬ್ರುಡಿಯಾನ್ ಹಾಗೂ ಪ್ರತಿನಿಧಿಗಳ ಸದನದ ಅಧ್ಯಕ್ಷ ಸೊರಿನ್ ಗ್ರಿಂಡೆಯಾನು ಅವರನ್ನು ಭೇಟಿಯಾಗಲಿದ್ದಾರೆ.
ಇದಲ್ಲದೆ, ರೊಮೇನಿಯಾ-ಭಾರತ ಸಂಸದೀಯ ಸ್ನೇಹ ಬಳಗದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದು, ಭಾರತ-ರೊಮೇನಿಯಾ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲಿನ ಭಾರತೀಯ ಸಮುದಾಯದ ಸದಸ್ಯರೊಂದಿಗೂ ಅವರು ಮಾತುಕತೆ ನಡೆಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ರಾಷ್ಟ್ರಪತಿ ಮುರ್ಮು ಅವರ ಈ ಮೂರು ರಾಷ್ಟ್ರಗಳ ಪ್ರವಾಸವು ಮೊಲ್ಡೋವಾ, ಉತ್ತರ ಮ್ಯಾಸಿಡೋನಿಯಾ ಮತ್ತು ರೊಮೇನಿಯಾ ದೇಶಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಪೂರ್ವ ಯುರೋಪ್ ಪ್ರದೇಶದೊಂದಿಗೆ ಭಾರತದ ಸಹಕಾರವನ್ನು ವಿಸ್ತರಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.


