ನವದೆಹಲಿ: ಸಿಬಿಎಸ್‌ಇ (CBSE) ಪಠ್ಯಕ್ರಮದಲ್ಲಿ 9ನೇ ತರಗತಿಯಿಂದ ಮೂರನೇ ಭಾಷೆಯನ್ನು ಪರಿಚಯಿಸುವುದು ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದ, 5 ಅಥವಾ 6ನೇ ತರಗತಿಯಿಂದಲೇ ಮೂರನೇ ಭಾಷೆಯನ್ನು ಬೋಧನೆಗೆ ಪರಿಚಯಿಸುವುದು ಸೂಕ್ತ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಆರ್. ಮಹಾದೇವನ್ ಅವರಿದ್ದ ಪೀಠವು ವಿಚಾರಣೆ ವೇಳೆ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, 9ನೇ ತರಗತಿಯಲ್ಲಿ ಮೂರನೇ ಭಾಷೆಯನ್ನು ಪರಿಚಯಿಸದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಹೊಸ ಭಾಷೆಯನ್ನು ಕಲಿಯಲು ಹೆಚ್ಚು ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಹೀಗಾಗಿ, 5 ಅಥವಾ 6ನೇ ತರಗತಿಯಿಂದಲೇ ಮೂರನೇ ಭಾಷೆ ಕಲಿಕೆ ಆರಂಭಿಸಿದರೆ ಅದನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ತಮಿಳುನಾಡಿನ ಪ್ರತಿಯೊಂದು ಜಿಲ್ಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯ (JNV) ಸ್ಥಾಪನೆಗೆ ಅವಕಾಶ ಕಲ್ಪಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಅನುಸರಿಸಲಾಗುತ್ತಿರುವ ತ್ರಿಭಾಷಾ ನೀತಿ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಾ, ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಈ ಶಾಲೆಗಳ ಸ್ಥಾಪನೆಗೆ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ.


