ಬೆಂಗಳೂರು: ನಟ ಕಿರಣ್ ರಾಜ್ ಅಭಿನಯದ ಬಹುನಿರೀಕ್ಷಿತ ‘ಜಾಕಿ 42’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಚಿತ್ರದ ರೊಮ್ಯಾಂಟಿಕ್ ಲೋಕದ ಸುಂದರ ಝಲಕ್ ಅನ್ನು ಅಭಿಮಾನಿಗಳಿಗೆ ಪರಿಚಯಿಸಿದೆ.
‘ಮುತ್ತು ಮುತ್ತು ಮಾತಾಯಿತ’ ಎಂಬ ಶೀರ್ಷಿಕೆಯ ಈ ಮಧುರ ಗೀತೆಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ವಿನೋದ್ ಯಾಜಮಾನ್ಯ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ-ಗಾಯಕಿ ಅರ್ಮಾನ್ ಮಲಿಕ್ ಮತ್ತು ಪಲಕ್ ಮುಚ್ಚಲ್ ಈ ಹಾಡಿಗೆ ಧ್ವನಿ ನೀಡಿದ್ದು, ಗೀತೆಯ ಮೆರುಗು ಮತ್ತಷ್ಟು ಹೆಚ್ಚಿಸಿದೆ.
ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ಚಿತ್ರವನ್ನು ನಿರ್ಮಿಸಿದ್ದು, ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಕುದುರೆ ಓಟ (Horse Racing) ಅನ್ನು ಪ್ರಮುಖ ಕಥಾಹಂದರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರವು, ಈ ಕ್ರೀಡೆಯನ್ನು ಕೇಂದ್ರವಾಗಿಟ್ಟುಕೊಂಡು ಮೂಡಿಬರುತ್ತಿರುವ ಭಾರತದ ಮೊದಲ ಚಿತ್ರಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ವಿಭಿನ್ನ ಕಥಾವಸ್ತು ಮತ್ತು ಅದ್ದೂರಿ ನಿರೂಪಣೆಯಿಂದ ಸಿನಿಪ್ರಿಯರ ಗಮನ ಸೆಳೆದಿತ್ತು. ಇದೀಗ ಬಿಡುಗಡೆಯಾದ ಮೊದಲ ಹಾಡಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಾಣಿ, ಮಧುಸೂದನ್ ರಾವ್, ಗಿರೀಶ್ ಹೆಗ್ಡೆ, ಅರುಣ್ ಆಚಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರಾಗವೇಂದ್ರ ಕೋಲಾರ್ ಅವರ ಛಾಯಾಗ್ರಹಣ ಹಾಗೂ ಉಮೇಶ್ ಆರ್.ಬಿ. ಅವರ ಸಂಕಲನವಿರುವ ಈ ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.


