ವಿಯೆಟ್ನಾಂನಲ್ಲಿ ಭಾರತೀಯ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ ದುರಂತ; ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ

1 Min Read
1 Min Read

ಹನೋಯಿ: ವಿಯೆಟ್ನಾಂನ ಫು ಕ್ವಾಕ್ (Phu Quoc) ದ್ವೀಪದ ಸಮೀಪ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್‌ಬೋಟ್ ಮಗುಚಿ ಬಿದ್ದಿದ್ದು, ಸ್ಥಳೀಯ ಅಧಿಕಾರಿಗಳು ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ದುರ್ಘಟನೆಯಲ್ಲಿ 15 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, 21 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ದುರಂತಕ್ಕೀಡಾದ ಸ್ಪೀಡ್‌ಬೋಟ್‌ನಲ್ಲಿ 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ವರು ಸಿಬ್ಬಂದಿ ಸೇರಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಹೋನ್ ಮೇ ರುಟ್ ನ್ಗೋಯಿ (Hon May Rut Ngoai) ದ್ವೀಪದಿಂದ ಸುಮಾರು 400 ಮೀಟರ್ ದೂರದಲ್ಲಿ ದೋಣಿ ಮಗುಚಿ ಬಿದ್ದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಭಾರತೀಯ ರಾಯಭಾರ ಕಚೇರಿ

ಹನೋಯಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ನೀಡಿದ್ದು, ಘಟನೆಯ ನಿಖರ ವಿವರಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದೆ. ಸ್ಥಳೀಯ ಆಡಳಿತದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಹೇಳಿದೆ.

ಕುಟುಂಬಗಳ ನೆರವಿಗಾಗಿ ನಿಯಂತ್ರಣ ಕೊಠಡಿ ಸ್ಥಾಪನೆ

ಘಟನೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಮಾಹಿತಿ ಮತ್ತು ನೆರವು ಒದಗಿಸುವ ಉದ್ದೇಶದಿಂದ ಹೋ ಚಿ ಮಿನ್ ಸಿಟಿಯಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ವಿಶೇಷ ನಿಯಂತ್ರಣ ಕೊಠಡಿ (Control Room) ಸ್ಥಾಪಿಸಲಾಗಿದೆ.

ಅದರೊಂದಿಗೆ, ಹನೋಯಿಯಲ್ಲಿಯೂ ಮತ್ತೊಂದು ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಅಗತ್ಯ ಮಾಹಿತಿಗಾಗಿ ಕುಟುಂಬಸ್ಥರು ಅಲ್ಲಿಯೂ ಸಂಪರ್ಕಿಸಬಹುದಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

ಭಾರತೀಯ ಪ್ರವಾಸಿಗರ ಸ್ಥಿತಿ ಹಾಗೂ ರಕ್ಷಣಾ ಕಾರ್ಯಾಚರಣೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Share This Article