ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರಿಕೆ ಕಂಡಿವೆ. ಹೊಸದಾಗಿ ಉದ್ಭವಿಸಿರುವ ಭೂರಾಜಕೀಯ (Geopolitical) ಉದ್ವಿಗ್ನತೆ ಮತ್ತು ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯ ಆತಂಕದಿಂದ ಕಚ್ಚಾ ತೈಲದ ದರಗಳು ಏರಿಕೆಯತ್ತ ಮುಖಮಾಡಿವೆ.
ಇತ್ತೀಚಿನ ವಹಿವಾಟಿನ ಪ್ರಕಾರ, ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.0.7ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 76.84 ಅಮೆರಿಕನ್ ಡಾಲರ್‌ಗೆ ವಹಿವಾಟು ನಡೆಯಿತು.
ಅದೇ ವೇಳೆ, ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶೇ.0.5ಕ್ಕಿಂತ ಹೆಚ್ಚು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 72.48 ಅಮೆರಿಕನ್ ಡಾಲರ್‌ಗೆ ವಹಿವಾಟು ನಡೆದಿರುವುದಾಗಿ ವರದಿಗಳು ತಿಳಿಸಿವೆ.
ಜಾಗತಿಕ ಮಟ್ಟದಲ್ಲಿ ಉದ್ಭವಿಸುತ್ತಿರುವ ಭದ್ರತಾ ಸವಾಲುಗಳು ಹಾಗೂ ಪೂರೈಕೆ ಸರಪಳಿಯ ಮೇಲಿನ ಅನಿಶ್ಚಿತತೆ ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿದ್ದು, ಅದರ ಪರಿಣಾಮವಾಗಿ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ದಾಖಲಾಗಿದೆ.


