ಭಯೋತ್ಪಾದನೆಗೆ ಭಾರತ–ಇಂಡೋನೇಷ್ಯಾದಿಂದ ಶೂನ್ಯ ಸಹಿಷ್ಣುತೆ: ಮೋದಿ–ಸುಬಿಯಾಂತೊ ಮಹತ್ವದ ಘೋಷಣೆ

2 Min Read
2 Min Read

ಜಕಾರ್ತಾ: ಭಾರತ ಮತ್ತು ಇಂಡೋನೇಷ್ಯಾ ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ತೀವ್ರವಾಗಿ ಖಂಡಿಸಿದ್ದು, ಅಂತರರಾಷ್ಟ್ರೀಯ ಕಾನೂನುಗಳ ಚೌಕಟ್ಟಿನಡಿ ಜಾಗತಿಕ ಮಟ್ಟದಲ್ಲಿ ಸಂಘಟಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಪುನರುಚ್ಚರಿಸಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ಬಿಡುಗಡೆಗೊಂಡ ಜಂಟಿ ಪ್ರಕಟಣೆಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿ ಪಟ್ಟಿಯಲ್ಲಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದ್ದಾರೆ.

ಭಯೋತ್ಪಾದನೆ ಹಾಗೂ ಉಗ್ರವಾದವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಉಭಯ ರಾಷ್ಟ್ರಗಳು ಸಹಕಾರವನ್ನು ಮತ್ತಷ್ಟು ಬಲಪಡಿಸಲು ಒಪ್ಪಿಕೊಂಡಿವೆ. ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ ವಿರುದ್ಧದ ಜಾಗತಿಕ ಮಾನದಂಡಗಳ ಪರಿಣಾಮಕಾರಿ ಅನುಷ್ಠಾನ, ಹೊಸ ತಂತ್ರಜ್ಞಾನಗಳ ದುರುಪಯೋಗವನ್ನು ತಡೆಯುವುದು ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ನಡೆಯುವ ಉಗ್ರವಾದಿ ಪ್ರಚೋದನೆ ಮತ್ತು ನೇಮಕಾತಿಯನ್ನು ನಿಯಂತ್ರಿಸಲು ಒಟ್ಟಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿವೆ.

ಇದರೊಂದಿಗೆ, ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಮತ್ತೊಮ್ಮೆ ದೃಢಪಡಿಸಿದ ಭಾರತ ಮತ್ತು ಇಂಡೋನೇಷ್ಯಾ, ಭಯೋತ್ಪಾದನೆಗೆ ಹಣಕಾಸು ಒದಗಿಸುವ ಜಾಲಗಳನ್ನು ಧ್ವಂಸಗೊಳಿಸುವ ಜೊತೆಗೆ ವಿಶ್ವಸಂಸ್ಥೆ ಹಾಗೂ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ಹೆಚ್ಚಿಸಲು ಸಂಕಲ್ಪ ವ್ಯಕ್ತಪಡಿಸಿವೆ.

ಭಯೋತ್ಪಾದನೆ ಮತ್ತು ಅಂತರರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ಮಾಹಿತಿ ವಿನಿಮಯ ಹಾಗೂ ಉತ್ತಮ ಕಾರ್ಯಪದ್ಧತಿಗಳನ್ನು ಪರಸ್ಪರ ಹಂಚಿಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಭಯೋತ್ಪಾದನೆ ನಿಗ್ರಹ ಸಹಕಾರ ಕುರಿತ ಒಪ್ಪಂದ ಪತ್ರ (MoU) ಶೀಘ್ರದಲ್ಲೇ ಸಹಿಯಾಗುವ ನಿರೀಕ್ಷೆಯಿದ್ದು, ಅದನ್ನು ಎರಡೂ ದೇಶಗಳು ಸ್ವಾಗತಿಸಿವೆ.

ಇದೇ ವೇಳೆ, ಮೂರನೇ ಭಾರತ–ಇಂಡೋನೇಷ್ಯಾ ಭದ್ರತಾ ಸಂವಾದವನ್ನು ಶೀಘ್ರದಲ್ಲೇ ನಡೆಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಈ ಸಂವಾದದಲ್ಲಿ ಭಯೋತ್ಪಾದನೆ ನಿಗ್ರಹ, ಅಂತರರಾಷ್ಟ್ರೀಯ ಅಪರಾಧ, ಸೈಬರ್ ಭದ್ರತೆ, ಉದಯೋನ್ಮುಖ ತಂತ್ರಜ್ಞಾನ, ರಕ್ಷಣಾ ಕೈಗಾರಿಕೆ, ಸಮುದ್ರ ಭದ್ರತೆ ಹಾಗೂ ಬಾಹ್ಯಾಕಾಶ ಸಹಕಾರ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ.

ಆರ್ಥಿಕ ಹಾಗೂ ವ್ಯಾಪಾರ ಸಹಕಾರಕ್ಕೂ ಮಾತುಕತೆಯಲ್ಲಿ ವಿಶೇಷ ಆದ್ಯತೆ ನೀಡಲಾಯಿತು. ಭಾರತದ ‘ವಿಕಸಿತ ಭಾರತ–2047’ ಹಾಗೂ ಇಂಡೋನೇಷ್ಯಾದ ‘ಇಂಡೋನೇಷ್ಯಾ ಎಮಾಸ್–2045’ ಅಭಿವೃದ್ಧಿ ದೃಷ್ಟಿಕೋನಗಳು ಪರಸ್ಪರ ಪೂರಕವಾಗಿದ್ದು, ಇದರಿಂದ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳು ಮತ್ತಷ್ಟು ವಿಸ್ತರಿಸಲಿವೆ ಎಂದು ನಾಯಕರು ಅಭಿಪ್ರಾಯಪಟ್ಟರು.

ಇದರ ಜೊತೆಗೆ, ಆಸಿಯಾನ್–ಭಾರತ ಸರಕು ವ್ಯಾಪಾರ ಒಪ್ಪಂದ (AITIGA) ಪರಿಶೀಲನೆ ಶೀಘ್ರ ಪೂರ್ಣಗೊಳಿಸಿ ಸಮತೋಲನಯುತ ಹಾಗೂ ಪರಸ್ಪರ ಲಾಭದಾಯಕ ವ್ಯಾಪಾರ ವಾತಾವರಣ ನಿರ್ಮಿಸಲು ಒತ್ತಾಯಿಸಿದರು. ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ನಿವಾರಿಸುವುದು, ಮಾರುಕಟ್ಟೆ ಪ್ರವೇಶ ಸುಲಭಗೊಳಿಸುವುದು, ಹೂಡಿಕೆ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಣಕಾಸು, ಡಿಜಿಟಲ್ ಆರ್ಥಿಕತೆ, ಕೈಗಾರಿಕೆ ಹಾಗೂ ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಎರಡೂ ದೇಶಗಳು ನಿರ್ಧರಿಸಿವೆ.

ಮಾತುಕತೆಯ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರಿಗೆ ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಆಹ್ವಾನಿಸಿದರು.

Share This Article