‘ಚಳಿಗೆ ಬಾಯಿ ಗಟ್ಟಿಯಾಗಿತ್ತು… ಡೈಲಾಗ್ ಹೇಳಲು ಆಗಲೇ ಇಲ್ಲ’; ‘ದಿ ಒಡಿಸ್ಸಿ’ ಚಿತ್ರೀಕರಣದ ಅನುಭವ ಹಂಚಿಕೊಂಡ ಜೆಂಡಯಾ
ಹಾಲಿವುಡ್ನ ಬಹುನಿರೀಕ್ಷಿತ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದಿ ಒಡಿಸ್ಸಿ’ (The Odyssey) ಚಿತ್ರದ ಚಿತ್ರೀಕರಣದ ವೇಳೆ ಎದುರಾದ ಸವಾಲಿನ ಅನುಭವವನ್ನು ನಟಿ ಜೆಂಡಯಾ ಹಂಚಿಕೊಂಡಿದ್ದಾರೆ. ಐಸ್ಲ್ಯಾಂಡ್ನ ತೀವ್ರ ಚಳಿಯಿಂದ ತಮ್ಮ ಬಾಯಿಯೇ ಗಟ್ಟಿಯಾಗಿ ಡೈಲಾಗ್ ಹೇಳಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಜೆಂಡಯಾ, “ನನ್ನ ಡೈಲಾಗ್ಗಳನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದೆ. ಆದರೆ ಐಸ್ಲ್ಯಾಂಡ್ನಲ್ಲಿ ಅಷ್ಟು ಚಳಿ ಇತ್ತು, ನನ್ನ ಬಾಯಿ ಸಂಪೂರ್ಣವಾಗಿ ಗಟ್ಟಿಯಾಗಿತ್ತು. ಮಾತುಗಳು ಸರಿಯಾಗಿ ಹೊರಬರಲೇ ಇಲ್ಲ. ಡೈಲಾಗ್ಗಳು ‘ಬ್ಲಾ… ಬ್ಲಾ…’ ಎಂದು ಕೇಳಿಬಂದವು. ಆ ಕ್ಷಣ ತುಂಬಾ ಮುಜುಗರವಾಯಿತು,” ಎಂದು ಹೇಳಿದ್ದಾರೆ.
ಆದರೆ, ಇಂತಹ ಸವಾಲಿನ ನಡುವೆಯೂ ತಮ್ಮ ಮೆಚ್ಚಿನ ಕಲಾವಿದರೊಂದಿಗೆ ಅಭಿನಯಿಸುವ ಅವಕಾಶ ದೊರೆತಿದ್ದೇ ದೊಡ್ಡ ಭಾಗ್ಯ ಎಂದು ಅವರು ಹೇಳಿದರು.
“ನಾವು ಕೆಲಸ ಮಾಡುವಾಗ ಭಾವನೆಗಳನ್ನು ಸ್ವಲ್ಪ ಬದಿಗಿಟ್ಟು ಪಾತ್ರದ ಮೇಲೆ ಗಮನಹರಿಸಬೇಕು. ಆದರೂ ನಾನು ಆ ಸೆಟ್ನಲ್ಲಿ ಇರುವುದೇ ಒಂದು ಅದ್ಭುತ ಅನುಭವವಾಗಿತ್ತು. ಎಲ್ಲರೂ ಗೌರವಿಸುವ ಕಲಾವಿದರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನಗೆ ದೊಡ್ಡ ಉಡುಗೊರೆ,” ಎಂದು ಜೆಂಡಯಾ ತಿಳಿಸಿದ್ದಾರೆ.
ಗ್ರೀಕ್ ಮಹಾಕಾವ್ಯ ಆಧಾರಿತ ಸಿನಿಮಾ
ಹೊಮರ್ ಅವರ ಪ್ರಸಿದ್ಧ ಗ್ರೀಕ್ ಮಹಾಕಾವ್ಯವನ್ನು ಆಧರಿಸಿರುವ ‘ದಿ ಒಡಿಸ್ಸಿ’ ಚಿತ್ರದಲ್ಲಿ ಮ್ಯಾಟ್ ಡೇಮನ್ ಒಡಿಸಿಯಸ್ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೋಜನ್ ಯುದ್ಧದ ಬಳಿಕ ಸ್ವದೇಶಕ್ಕೆ ಮರಳುವ ರಾಜ ಒಡಿಸಿಯಸ್ ಅವರ ಸಾಹಸಮಯ ಪ್ರಯಾಣವೇ ಚಿತ್ರದ ಕಥಾವಸ್ತು.
ಚಿತ್ರದಲ್ಲಿ ಟಾಮ್ ಹಾಲೆಂಡ್ ಟೆಲಿಮೇಕಸ್ ಪಾತ್ರದಲ್ಲಿ, ಆನ್ ಹ್ಯಾಥವೇ ಪೆನೆಲೋಪೆ ಪಾತ್ರದಲ್ಲಿ ಹಾಗೂ ಜೆಂಡಯಾ ದೇವತೆ ಅಥೀನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರಾಬರ್ಟ್ ಪ್ಯಾಟಿನ್ಸನ್, ಲುಪಿಟಾ ನ್ಯೊಂಗೋ, ಸಮಾಂಥಾ ಮಾರ್ಟನ್ ಮತ್ತು ಚಾರ್ಲೀಸ್ ಥೆರಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
IMAXನಲ್ಲಿ ಹೊಸ ದಾಖಲೆ
ಕ್ರಿಸ್ಟೋಫರ್ ನೋಲನ್ ಹಾಗೂ ಎಮ್ಮಾ ಥಾಮಸ್ ನಿರ್ಮಿಸಿರುವ ಈ ಚಿತ್ರ ಸಂಪೂರ್ಣವಾಗಿ IMAX ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲಾದ ವಿಶ್ವದ ಮೊದಲ ಫೀಚರ್ ಸಿನಿಮಾ ಎಂಬ ವಿಶೇಷ ದಾಖಲೆಯನ್ನೂ ನಿರ್ಮಿಸಿದೆ.
‘ದಿ ಒಡಿಸ್ಸಿ’ ಚಿತ್ರ ಜುಲೈ 17ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.


