ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ನಿಷೇಧಿತ ಉಲ್ಫಾ (ಐ) ಸಂಘಟನೆಯ ಮುಖ್ಯಸ್ಥ ಪರೇಶ್ ಬರುವಾ ಸೇರಿದಂತೆ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
2024ರ ಆಗಸ್ಟ್ 15ರಂದು ಗುವಾಹಟಿಯ ಪಾನ್ಬಜಾರ್ ಪ್ರದೇಶದ ಮೋತಿಲಾಲ್ ನೆಹರು ರಸ್ತೆಯಲ್ಲಿ ಐಇಡಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಎನ್ಐಎ, ಗುವಾಹಟಿಯ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿರುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ನಿಷೇಧಿತ ಉಲ್ಫಾ (ಐ) ಸಂಘಟನೆಯ ಅಧ್ಯಕ್ಷನಾಗಿರುವ ಪರೇಶ್ ಬರುವಾ ಸೇರಿದಂತೆ ಐವರು ಆರೋಪಿಗಳನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ, 1908ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಈ ಪ್ರಕರಣವನ್ನು 2024ರ ಆಗಸ್ಟ್ 16ರಂದು ಗುವಾಹಟಿಯ ಪಾನ್ಬಜಾರ್ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ದಾಖಲಿಸಲಾಗಿತ್ತು. ಬಳಿಕ 2025ರ ಫೆಬ್ರವರಿ 27ರಂದು ಎನ್ಐಎ ಪ್ರಕರಣವನ್ನು ಮರುದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿತ್ತು.


