ನವದೆಹಲಿ: ಸಾಕ್ಷ್ಯಾಧಾರಿತ ನೀತಿಗಳನ್ನು ರೂಪಿಸಲು ದತ್ತಾಂಶ ಸಂಗ್ರಹಣೆ ಮತ್ತು ಅದರ ಸಮಗ್ರ ವಿಶ್ಲೇಷಣೆ ಅತ್ಯಗತ್ಯವಾಗಿದ್ದು, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ ಎಂದು ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಹೇಳಿದ್ದಾರೆ.
ನವದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ಅಭಿವೃದ್ಧಿ ಪಯಣದಲ್ಲಿ ದತ್ತಾಂಶ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಸಮನ್ವಯ ಸಾಧಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ದತ್ತಾಂಶ ಸಂಗ್ರಹಣೆಯಲ್ಲಿ ಏಕರೂಪದ ವಿಧಾನಗಳನ್ನು ಅನುಸರಿಸುವುದು, ಸಾಮಾನ್ಯ ವ್ಯಾಖ್ಯಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಪ್ರಮಾಣಿತ ವರ್ಗೀಕರಣಗಳನ್ನು ಬಳಸುವುದು ಮುಖ್ಯವಾಗಿದೆ ಎಂದು ಹೇಳಿದರು.
ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಗ್ರಹವಾಗುವ ದತ್ತಾಂಶವು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಸೇರಿದಂತೆ ರಾಷ್ಟ್ರೀಯ ಅಂಕಿಅಂಶಗಳನ್ನು ಸಿದ್ಧಪಡಿಸಲು ಮಹತ್ವದ ಆಧಾರವಾಗಲಿದೆ ಎಂದು ಮಿಶ್ರಾ ಅಭಿಪ್ರಾಯಪಟ್ಟರು.
ಕಳೆದ ಒಂದು ದಶಕದಲ್ಲಿ ಭಾರತವು ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಸಾರ್ವಜನಿಕ ಸೇವೆಗಳು, ಆರ್ಥಿಕ ಒಳಗೊಳ್ಳುವಿಕೆ ಮತ್ತು ಉದ್ಯಮಶೀಲತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ ಎಂದು ಅವರು ಹೇಳಿದರು.
2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವುದರ ಜೊತೆಗೆ, ಅದರ ಪ್ರಗತಿಯನ್ನು ನಿಖರವಾಗಿ ಅಳೆಯುವುದೂ ಅಗತ್ಯವಾಗಿದೆ ಎಂದು ಮಿಶ್ರಾ ತಿಳಿಸಿದರು. ಸಮೃದ್ಧ, ಎಲ್ಲರನ್ನೂ ಒಳಗೊಳ್ಳುವ, ನಾವೀನ್ಯತೆಯಿಂದ ಕೂಡಿದ ಮತ್ತು ಸುಸ್ಥಿರ ರಾಷ್ಟ್ರವಾಗಿ ಭಾರತ ಬೆಳೆಯುತ್ತಿರುವ ಹಾದಿಯನ್ನು ಮೌಲ್ಯಮಾಪನ ಮಾಡಲು ವಿಶ್ವಾಸಾರ್ಹ ದತ್ತಾಂಶ ನೆರವಾಗಲಿದೆ ಎಂದು ಅವರು ಹೇಳಿದರು.


