ಮಕ್ಕಳ ಪೌಷ್ಟಿಕತೆ, ಆರೋಗ್ಯಕ್ಕೆ ಮತ್ತಷ್ಟು ಒತ್ತು: ರಾಷ್ಟ್ರೀಯ ಪೋಷಣ್ ಮಾಹ್ 2026ಕ್ಕೆ ಚಾಲನೆ

2 Min Read
2 Min Read

ನವದೆಹಲಿ: 9ನೇ ರಾಷ್ಟ್ರೀಯ ಪೋಷಣ್ ಮಾಹ್ 2026ಕ್ಕೆ ಬುಧವಾರ ವಾರಾಣಸಿಯಲ್ಲಿ ಚಾಲನೆ ದೊರೆಯಲಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ ನಡೆಯಲಿರುವ ಈ ಅಭಿಯಾನದಲ್ಲಿ ಪೌಷ್ಟಿಕತೆ, ಆರೋಗ್ಯ ಮತ್ತು ಮಕ್ಕಳ ಆರೈಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಅಡಿಯಲ್ಲಿ ಪರಿಷ್ಕರಿಸಲಾದ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದ (SNP) ಮಾರ್ಗಸೂಚಿಗಳು ಈ ಬಾರಿಯ ಅಭಿಯಾನಕ್ಕೆ ಪ್ರಮುಖ ಆಧಾರವಾಗಿವೆ. ಮೊದಲ ಬಾರಿಗೆ ಈ ಮಾರ್ಗಸೂಚಿಗಳಲ್ಲಿ ಬಿಸಿ ಬೇಯಿಸಿದ ಊಟ (Hot Cooked Meals), ಅಂಗನವಾಡಿ ಕೇಂದ್ರಗಳಲ್ಲಿ SNP ಮೆನು ಬೋರ್ಡ್‌ಗಳ ಕಡ್ಡಾಯ ಅಳವಡಿಕೆ ಹಾಗೂ ಅಂಗನವಾಡಿ ನಿರ್ವಹಣಾ ಸಮಿತಿಗಳ ಸ್ಥಾಪನೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಒಳಗೊಂಡಿದೆ.

‘ಸುಪೋಷಿತ ಭಾರತ’ದ ಗುರಿಗೆ ಪೋಷಣ್ ಅಭಿಯಾನ

2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ‘ಸುಪೋಷಿತ ಭಾರತ’ವೇ ಪ್ರಮುಖ ಅಡಿಪಾಯ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಪೋಷಣ್ ಅಭಿಯಾನವನ್ನು 2018ರಲ್ಲಿ ಆರಂಭಿಸಲಾಯಿತು.

ರಾಷ್ಟ್ರೀಯ ಅಭಿವೃದ್ಧಿಯ ಕಾರ್ಯಸೂಚಿಯಲ್ಲಿ ಪೌಷ್ಟಿಕತೆಗೆ ಪ್ರಮುಖ ಸ್ಥಾನ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಈ ಅಭಿಯಾನ, ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ನಡೆಯುವ ರಾಷ್ಟ್ರೀಯ ಪೋಷಣ್ ಮಾಹ್ ಮೂಲಕ ಮತ್ತಷ್ಟು ವಿಸ್ತಾರಗೊಂಡಿದೆ.

ಕಾಲಕ್ರಮೇಣ ಇದು ಕೇವಲ ಸರ್ಕಾರಿ ಕಾರ್ಯಕ್ರಮವಾಗಿರದೆ ಜನಾಂದೋಲನವಾಗಿ (Jan Andolan) ರೂಪುಗೊಂಡಿದ್ದು, ಮಹಿಳೆಯರು, ಮಕ್ಕಳು ಮತ್ತು ಕಿಶೋರರ ಪೌಷ್ಟಿಕತೆ, ಆರೋಗ್ಯ ಹಾಗೂ ಆರೈಕೆ ಕುರಿತ ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಲು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತಿದೆ.

‘ನಮ್ಮ ಅಂಗನವಾಡಿ–ನಮ್ಮ ಜವಾಬ್ದಾರಿ’ ಈ ವರ್ಷದ ಘೋಷವಾಕ್ಯ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ ಅವರು 9ನೇ ರಾಷ್ಟ್ರೀಯ ಪೋಷಣ್ ಮಾಹ್‌ಗೆ ಚಾಲನೆ ನೀಡಲಿದ್ದಾರೆ.

ಈ ವರ್ಷದ ಅಭಿಯಾನದ ಮುಖ್ಯ ಘೋಷವಾಕ್ಯ “ನಮ್ಮ ಅಂಗನವಾಡಿ–ನಮ್ಮ ಜವಾಬ್ದಾರಿ” ಎಂಬುದಾಗಿದೆ. ದೇಶದ ಮಕ್ಕಳಿಗೆ ಪೌಷ್ಟಿಕತೆ, ಆರೋಗ್ಯ, ಆರೈಕೆ ಮತ್ತು ಪ್ರಾಥಮಿಕ ಕಲಿಕೆಯನ್ನು ಒದಗಿಸುವ ಮೊದಲ ಪ್ರಮುಖ ಕೇಂದ್ರವಾಗಿರುವ ಅಂಗನವಾಡಿಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ತನ್ನ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ಈ ಘೋಷವಾಕ್ಯ ಸಾರುತ್ತದೆ.

ಐದು ಪ್ರಮುಖ ವಿಷಯಗಳ ಮೇಲೆ ಅಭಿಯಾನ

ಪೋಷಣ್ ಮಾಹ್ 2026ರಲ್ಲಿ ಪರಸ್ಪರ ಪೂರಕವಾಗಿರುವ ಐದು ಪ್ರಮುಖ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ.

ಅವುಗಳೆಂದರೆ:

  • ಆಹಾರ ವೈವಿಧ್ಯತೆ ಮತ್ತು ಸಮರ್ಪಕ ಪ್ರೋಟೀನ್ ಸೇವನೆ
  • ಅಂಗನವಾಡಿ ಕೇಂದ್ರಗಳಲ್ಲಿ ತಾಜಾ ಹಾಗೂ ಬಿಸಿ ಬೇಯಿಸಿದ ಊಟ
  • ಸಮುದಾಯದ ಪಾಲ್ಗೊಳ್ಳುವಿಕೆ, ಮಾಲೀಕತ್ವ ಮತ್ತು ಹೊಣೆಗಾರಿಕೆ
  • ಪೌಷ್ಟಿಕತೆ
  • ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಆರಂಭಿಕ ಉತ್ತೇಜನ ಮತ್ತು ಶಿಕ್ಷಣ

ಈ ವಿಷಯಗಳ ಮೂಲಕ ಮಕ್ಕಳ ಪೌಷ್ಟಿಕತೆ ಮತ್ತು ಸಮಗ್ರ ಬೆಳವಣಿಗೆಯ ಜೊತೆಗೆ ಅಂಗನವಾಡಿ ಕೇಂದ್ರಗಳ ಮೇಲಿನ ಸಮುದಾಯದ ಜವಾಬ್ದಾರಿಯನ್ನೂ ಬಲಪಡಿಸುವ ಗುರಿಯನ್ನು ಅಭಿಯಾನ ಹೊಂದಿದೆ.

ರಾಷ್ಟ್ರೀಯ ಪೋಷಣ್ ಮಾಹ್ 2026ರ ಮೂಲಕ ಪೌಷ್ಟಿಕ ಆಹಾರ, ಆರೋಗ್ಯಕರ ಜೀವನಶೈಲಿ, ಮಕ್ಕಳ ಆರಂಭಿಕ ಬೆಳವಣಿಗೆ ಹಾಗೂ ಅಂಗನವಾಡಿ ಕೇಂದ್ರಗಳ ಮಹತ್ವದ ಕುರಿತು ದೇಶಾದ್ಯಂತ ಮತ್ತಷ್ಟು ಜಾಗೃತಿ ಮೂಡಿಸುವ ಪ್ರಯತ್ನ ನಡೆಯಲಿದೆ.


 

Share This Article