ನವದೆಹಲಿ: ದೋಹಾದಿಂದ ದೆಹಲಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಅಪಾರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 2ರಂದು ಈ ಕಾರ್ಯಾಚರಣೆ ನಡೆದಿದೆ.
ಅಧಿಕೃತ ಮಾಹಿತಿಯ ಪ್ರಕಾರ, ದೋಹಾದಿಂದ ಬಂದ ಇಬ್ಬರು ಪ್ರಯಾಣಿಕರನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ತಡೆದು ಅವರ ಬ್ಯಾಗೇಜ್ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಒಟ್ಟು 20.883 ಕೆ.ಜಿ. ತೂಕದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ಪತ್ತೆಯಾಗಿದ್ದು, ಇವುಗಳ ಒಟ್ಟು ಟ್ಯಾರಿಫ್ ಮೌಲ್ಯ ಸುಮಾರು ₹47.16 ಲಕ್ಷ ಎಂದು ಅಂದಾಜಿಸಲಾಗಿದೆ.
ಪರಿಶೀಲನೆಯ ವೇಳೆ 484 ಬೆಳ್ಳಿ ನಾಣ್ಯಗಳು ಮತ್ತು ಒಂದು ಚಿನ್ನದ ನಾಣ್ಯ ಪತ್ತೆಯಾಗಿವೆ. ಇವುಗಳನ್ನು ಸೂಕ್ತ ಘೋಷಣೆ ಮಾಡದೆ ದೇಶಕ್ಕೆ ತರಲು ಪ್ರಯತ್ನಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾದ ಬೆಳ್ಳಿ ನಾಣ್ಯಗಳ ಪೈಕಿ 134 ನಾಣ್ಯಗಳು ಪುರಾತತ್ವ ಮಹತ್ವ ಹೊಂದಿರುವ ಸಾಧ್ಯತೆ ಇದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಪ್ರಾಥಮಿಕವಾಗಿ ತಿಳಿಸಿದೆ.
ಕಸ್ಟಮ್ಸ್ ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆ, 1962ರ ಸೆಕ್ಷನ್ 110 ಅಡಿಯಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


