ನವದೆಹಲಿ: ಭಗವಾನ್ ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ ಜನ್ಮಾಷ್ಟಮಿ ಹಬ್ಬವನ್ನು ದೇಶಾದ್ಯಂತ ಇಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿರುವ ಕೃಷ್ಣ ದೇವಾಲಯಗಳು ಹಾಗೂ ಮನೆಗಳು ವಿಶೇಷವಾಗಿ ಅಲಂಕೃತಗೊಂಡಿವೆ.
ಜನ್ಮಾಷ್ಟಮಿ ಅಂಗವಾಗಿ ಭಕ್ತರು ಉಪವಾಸ ಆಚರಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೀಕೃಷ್ಣನಿಗೆ ಪ್ರಿಯವಾದ ಸಿಹಿತಿಂಡಿ ಸೇರಿದಂತೆ ವಿವಿಧ ನೈವೇದ್ಯಗಳನ್ನು ಸಿದ್ಧಪಡಿಸಿ ಅರ್ಪಿಸಲಾಗುತ್ತಿದೆ. ದಿನವಿಡೀ ಭಜನೆ, ಕೀರ್ತನೆ ಹಾಗೂ ಶ್ರೀಕೃಷ್ಣನ ನಾಮಸ್ಮರಣೆ ನಡೆಯಲಿದ್ದು, ಹಲವು ಕಡೆಗಳಲ್ಲಿ ಮಧ್ಯರಾತ್ರಿಯವರೆಗೂ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯಲಿವೆ.
ಕೃಷ್ಣನ ಬಾಲ್ಯದ ಜೀವನಕ್ಕೆ ಸಂಬಂಧಿಸಿದ ಗೋಕುಲ ಮತ್ತು ವೃಂದಾವನದ ವಿವಿಧ ಪ್ರಸಂಗಗಳನ್ನು ಬಿಂಬಿಸುವ ದೃಶ್ಯಗಳಿಂದ ದೇವಾಲಯಗಳು ಹಾಗೂ ಮನೆಗಳನ್ನು ಅಲಂಕರಿಸಲಾಗಿದೆ.
ಮಥುರಾ-ವೃಂದಾವನದಲ್ಲಿ ಭರ್ಜರಿ ಸಿದ್ಧತೆ
ಉತ್ತರ ಪ್ರದೇಶದ ಮಥುರಾ-ವೃಂದಾವನದಲ್ಲಿ ಜನ್ಮಾಷ್ಟಮಿ ಆಚರಣೆಗೆ ಭರದ ಸಿದ್ಧತೆಗಳು ನಡೆದಿವೆ. ಶ್ರೀಕೃಷ್ಣನ ಜನ್ಮಭೂಮಿಯಾದ ಮಥುರಾದಲ್ಲಿ ಇಂದು ರಾತ್ರಿ ನಡೆಯಲಿರುವ ಪ್ರಮುಖ ಕಾರ್ಯಕ್ರಮಗಳಿಗೆ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಮಥುರಾದಲ್ಲಿ ನಡೆಯಲಿರುವ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ರಾಷ್ಟ್ರಪತಿ ಮುರ್ಮು ಶುಭಾಶಯ
ಜನ್ಮಾಷ್ಟಮಿ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಶ್ರೀಕೃಷ್ಣನ ಜೀವನ ಮತ್ತು ಬೋಧನೆಗಳು ಭಾರತದ ಸಾಂಸ್ಕೃತಿಕ ಹಾಗೂ ತಾತ್ವಿಕ ಪರಂಪರೆಗೆ ಹೊಸ ಚೈತನ್ಯ ನೀಡಿವೆ ಎಂದು ರಾಷ್ಟ್ರಪತಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಶ್ರೀಮದ್ಭಗವದ್ಗೀತೆಯಲ್ಲಿ ಸಾರಲಾಗಿರುವ ಶ್ರೀಕೃಷ್ಣನ ಉಪದೇಶಗಳು, ಕಷ್ಟದ ಸಂದರ್ಭಗಳಲ್ಲಿ ವಿವೇಕಯುತ ನಿರ್ಧಾರ ಕೈಗೊಳ್ಳಲು ಹಾಗೂ ನೈತಿಕ ಮೌಲ್ಯಗಳಲ್ಲಿ ದೃಢವಾಗಿ ನಿಲ್ಲಲು ಮಾನವಕುಲಕ್ಕೆ ಶಾಶ್ವತ ಪ್ರೇರಣೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಜನ್ಮಾಷ್ಟಮಿಯು ಎಲ್ಲರೂ ಸಾಮರಸ್ಯ, ಕರ್ತವ್ಯನಿಷ್ಠೆ ಹಾಗೂ ಸೇವಾಭಾವವನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.
ಓಂ ಬಿರ್ಲಾ ಶುಭಾಶಯ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಜನ್ಮಾಷ್ಟಮಿ ಅಂಗವಾಗಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಇರುವ ಅಸಂಖ್ಯಾತ ಭಕ್ತರಲ್ಲಿ ಶ್ರೀಕೃಷ್ಣನ ಮೇಲಿನ ಭಕ್ತಿ ಮತ್ತು ಪ್ರೀತಿ ಅಪಾರವಾಗಿದೆ ಎಂದು ಅವರು ಹೇಳಿದ್ದಾರೆ. ಭಗವದ್ಗೀತೆಯಲ್ಲಿರುವ ಆಳವಾದ ಜ್ಞಾನವು ಕರ್ತವ್ಯ, ನೈತಿಕತೆ, ನ್ಯಾಯ, ವಿವೇಕ, ಧೈರ್ಯ ಹಾಗೂ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ಕುರಿತು ಕಾಲಾತೀತ ಮಾರ್ಗದರ್ಶನ ನೀಡುತ್ತದೆ ಎಂದು ಓಂ ಬಿರ್ಲಾ ತಿಳಿಸಿದ್ದಾರೆ.


