ನವದೆಹಲಿ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿ ಸಂಚಾರ ಪೊಲೀಸರು ವಿಶೇಷ ಟ್ರಾಫಿಕ್ ಸಲಹೆ (Advisory) ಹೊರಡಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರವನ್ನು ಖಚಿತಪಡಿಸುವ ಉದ್ದೇಶದಿಂದ ಈ ಸಲಹೆ ಬೆಳಗ್ಗೆ 4ರಿಂದ 10 ಗಂಟೆಯವರೆಗೆ ಜಾರಿಯಲ್ಲಿರಲಿದೆ.
ಪ್ರಯಾಣಕ್ಕೂ ಮುನ್ನ ಯೋಜನೆ ರೂಪಿಸಿಕೊಳ್ಳಿ
ಕೆಂಪುಕೋಟೆ ಸುತ್ತಮುತ್ತ ಸಂಚರಿಸುವ ವಾಹನ ಸವಾರರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಹೆಚ್ಚುವರಿ ಪ್ರಯಾಣ ಸಮಯವನ್ನು ಮೀಸಲಿಡುವುದು, ನಿರ್ಬಂಧಿತ ರಸ್ತೆಗಳನ್ನು ತಪ್ಪಿಸುವುದು ಹಾಗೂ ಸೂಚಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ರಸ್ತೆಗಳಲ್ಲಿ ಅಳವಡಿಸಿರುವ ವೇರಿಯಬಲ್ ಮೆಸೇಜ್ ಸೈನ್ (VMS) ಹಾಗೂ ಕರ್ತವ್ಯದಲ್ಲಿರುವ ಸಂಚಾರ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಸುರಕ್ಷಿತವಾಗಿ ಹಾಗೂ ಸುಗಮವಾಗಿ ಸಾಗಲು ಸಾರ್ವಜನಿಕರು ಸಹಕರಿಸಬೇಕು ಎಂದು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ನೈಜ ಸಮಯದ ಸಂಚಾರ ಮಾಹಿತಿಗಾಗಿ ಅಧಿಕೃತ ಟ್ರಾಫಿಕ್ ಪೊಲೀಸ್ ಸಲಹೆಗಳನ್ನು ಪರಿಶೀಲಿಸುವಂತೆಯೂ ಸೂಚಿಸಲಾಗಿದೆ.
ದೆಹಲಿ ಮೆಟ್ರೋ ಸೇವೆ ಬೆಳಗ್ಗೆ 4ರಿಂದ
ಇದೇ ವೇಳೆ, ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ವಿಶೇಷ ಅತಿಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ದೆಹಲಿ ಮೆಟ್ರೋ ರೈಲು ನಿಗಮ (DMRC) ಮೆಟ್ರೋ ಸೇವೆಗಳ ಅವಧಿಯನ್ನು ವಿಸ್ತರಿಸಿದೆ.
ಕೆಂಪುಕೋಟೆ ತಲುಪಲು ಪ್ರಯಾಣಿಕರು ಲಾಲ್ ಕಿಲಾ, ಜಾಮಾ ಮಸೀದಿ ಹಾಗೂ ದೆಹಲಿ ಗೇಟ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯಬಹುದು.
ವಿಸ್ತರಿತ ಮೆಟ್ರೋ ಸೇವೆ ಬೆಳಗ್ಗೆ 4 ಗಂಟೆಗೆ ಆರಂಭವಾಗಲಿದ್ದು, ನಿಯಮಿತ ವೇಳಾಪಟ್ಟಿ ಜಾರಿಗೆ ಬರುವವರೆಗೆ ಪ್ರತಿ 30 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ ಎಂದು DMRC ತಿಳಿಸಿದೆ.
1.30 ಲಕ್ಷ ವಿಶೇಷ QR ಟಿಕೆಟ್
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಅಧಿಕೃತ ಆಹ್ವಾನಿತರು ಹಾಗೂ ವಿಶೇಷ ಅತಿಥಿಗಳ ಸುಗಮ ಸಂಚಾರಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ 1.30 ಲಕ್ಷ ವಿಶೇಷ ಮುಂಗಡ QR ಟಿಕೆಟ್ಗಳನ್ನು DMRC ಒದಗಿಸಿದೆ.
ವಿಶೇಷ ಅತಿಥಿಗಳು ತಮ್ಮ ಮಾನ್ಯ ಪ್ರವೇಶ ಪತ್ರದೊಂದಿಗೆ ಈ QR ಟಿಕೆಟ್ಗಳನ್ನು ನಿಗದಿತ ಮೆಟ್ರೋ ನಿಲ್ದಾಣಗಳಲ್ಲಿ ಬಳಸಿಕೊಳ್ಳಬಹುದು.


