AI ಯುಗದಲ್ಲಿ ಪದವಿ ಅಂತ್ಯವಲ್ಲ, ನಿರಂತರ ಕಲಿಕೆಯ ಹೊಸ ಆರಂಭ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

1 Min Read
1 Min Read

ತಿರುವಾರೂರು: ಕೃತಕ ಬುದ್ಧಿಮತ್ತೆ (AI) ಹಾಗೂ ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಇಂದಿನ ಯುಗದಲ್ಲಿ ಪದವಿ ಪಡೆಯುವುದು ಶಿಕ್ಷಣದ ಅಂತ್ಯವಲ್ಲ, ನಿರಂತರ ಕಲಿಕೆ ಮತ್ತು ಬದಲಾವಣೆಗೆ ಹೊಂದಿಕೊಳ್ಳುವ ಜೀವನದ ಹೊಸ ಹಂತದ ಆರಂಭ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.

ತಮಿಳುನಾಡಿನ ತಿರುವಾರೂರಿನಲ್ಲಿ ಇಂದು ನಡೆದ ಕೇಂದ್ರ ತಮಿಳುನಾಡು ವಿಶ್ವವಿದ್ಯಾಲಯದ (CUTN) 11ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನಪೂರ್ತಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನವು ಉದ್ಯೋಗ ಮತ್ತು ಸಮಾಜದ ಸ್ವರೂಪವನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ, ಹೊಸ ಜ್ಞಾನವನ್ನು ಅಳವಡಿಸಿಕೊಳ್ಳುವುದು ಹಾಗೂ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ತಕ್ಕಂತೆ ತಮ್ಮ ಕೌಶಲ್ಯಗಳನ್ನು ರೂಪಿಸಿಕೊಳ್ಳುವುದು ಯುವಜನರಿಗೆ ಅತ್ಯಗತ್ಯ ಎಂದು ಅವರು ಹೇಳಿದರು.

2014ರಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ವಿಸ್ತರಣೆ

2014ರಿಂದ ಭಾರತದಲ್ಲಿ ಶೈಕ್ಷಣಿಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ವಿಸ್ತರಣೆ ಕಂಡುಬಂದಿದೆ ಎಂದು ಉಪರಾಷ್ಟ್ರಪತಿ ಹೇಳಿದರು.

ದೇಶದಲ್ಲಿ 16 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು (IIITs), 8 ಕೇಂದ್ರ ವಿಶ್ವವಿದ್ಯಾಲಯಗಳು, 8 ಭಾರತೀಯ ನಿರ್ವಹಣಾ ಸಂಸ್ಥೆಗಳು (IIMs) ಮತ್ತು 12 ಹೊಸ ಏಮ್ಸ್ ಆಸ್ಪತ್ರೆಗಳು ಸ್ಥಾಪನೆಯಾಗಿರುವುದನ್ನು ಅವರು ಉಲ್ಲೇಖಿಸಿದರು.

ಶಿಕ್ಷಣವು ಸಮಾಜದಲ್ಲಿನ ಬಡತನ ಮತ್ತು ಅಜ್ಞಾನವನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವತಂತ್ರ ಚಿಂತನೆ, ತಂಡದ ಕಾರ್ಯಕ್ಕೆ ಒತ್ತು

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಕುರಿತು ಮಾತನಾಡಿದ ರಾಧಾಕೃಷ್ಣನ್, ಶಿಕ್ಷಣದ ಮೌಲ್ಯಮಾಪನವು ಕೇವಲ ಅಂಕಗಳು ಅಥವಾ ಪದವಿಗೆ ಸೀಮಿತವಾಗಬಾರದು ಎಂದು ಹೇಳಿದರು.

ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯ, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಕೌಶಲ್ಯ ಹಾಗೂ ತಂಡವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಇಂದಿನ ಶಿಕ್ಷಣದ ಪ್ರಮುಖ ಗುರಿಗಳಾಗಬೇಕು ಎಂದು ಅವರು ತಿಳಿಸಿದರು.

ತಂತ್ರಜ್ಞಾನ ಎಷ್ಟೇ ವೇಗವಾಗಿ ಬದಲಾಗಿದರೂ, ಕಲಿಕೆಯ ಆಸಕ್ತಿ, ವಿಚಾರಶೀಲತೆ ಮತ್ತು ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳ ಮುಂದಿನ ಪಯಣಕ್ಕೆ ಮಾರ್ಗದರ್ಶಕವಾಗಬೇಕು ಎಂದು ಉಪರಾಷ್ಟ್ರಪತಿ ಕರೆ ನೀಡಿದರು.

Share This Article