ನವದೆಹಲಿ: BWF ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ 2026ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಚಾಲನೆ ದೊರೆಯಲಿದೆ. ಆಗಸ್ಟ್ 17ರಿಂದ 23ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ತವರಿನ ಅಂಗಳದಲ್ಲಿ ಭಾರತೀಯ ಶಟ್ಲರ್‌ಗಳು ಪದಕದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಭಾರತದಲ್ಲಿ ವಿಶ್ವ ಚಾಂಪಿಯನ್‌ಶಿಪ್ 17 ವರ್ಷಗಳ ಬಳಿಕ ನಡೆಯುತ್ತಿರುವುದು ವಿಶೇಷ.
ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಹಾಗೂ 9ನೇ ಶ್ರೇಯಾಂಕದ ಪಿ.ವಿ. ಸಿಂಧು ಅವರು ಐರ್ಲೆಂಡ್‌ನ ಸೋಫಿಯಾ ನೋಬಲ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.
ಮಹಿಳಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ–ಗಾಯತ್ರಿ ಗೋಪಿಚಂದ್ ಜೋಡಿ ಸ್ಪೇನ್‌ನ ಪೌಲಾ ಲೋಪೆಜ್–ಲುಸಿಯಾ ರೋಡ್ರಿಗಸ್ ಜೋಡಿಯನ್ನು ಎದುರಿಸಲಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಯುವ ಆಟಗಾರ ಆಯುಷ್ ಶೆಟ್ಟಿ ಅವರಿಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. ಅವರು ವಿಶ್ವ ನಂ.1 ಹಾಗೂ ಹಾಲಿ ವಿಶ್ವ ಚಾಂಪಿಯನ್ ಚೀನಾದ ಶಿ ಯು ಕಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಸಾತ್ವಿಕ್–ಚಿರಾಗ್‌ಗೆ ಬೈ; ಎರಡನೇ ಸುತ್ತಿಗೆ ಪ್ರವೇಶ
ಪುರುಷರ ಡಬಲ್ಸ್‌ನಲ್ಲಿ ಭಾರತದ ಪ್ರಮುಖ ಜೋಡಿ ಹಾಗೂ 5ನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿಗೆ ಮೊದಲ ಸುತ್ತಿನಲ್ಲಿ ಬೈ ದೊರೆತಿದ್ದು, ನೇರವಾಗಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.
ಇನ್ನೊಂದೆಡೆ, ಎಂ.ಆರ್. ಅರ್ಜುನ್–ಹರಿಹರನ್ ಅಮ್ಸಕರೂಣನ್ ಜೋಡಿ ಐರ್ಲೆಂಡ್‌ನ ಸ್ಕಾಟ್ ಗಿಲ್ಡಿಯಾ–ಪಾಲ್ ರೆನಾಲ್ಡ್ಸ್ ಜೋಡಿಯನ್ನು ಎದುರಿಸಲಿದೆ.
ಮಿಶ್ರ ಡಬಲ್ಸ್‌ನಲ್ಲಿ 15ನೇ ಶ್ರೇಯಾಂಕದ ಧ್ರುವ್ ಕಪಿಲಾ–ತನಿಷಾ ಕ್ರಾಸ್ಟೊ ಜೋಡಿಗೂ ಮೊದಲ ಸುತ್ತಿನಲ್ಲಿ ಬೈ ದೊರೆತಿದ್ದು, 32ರ ಸುತ್ತಿಗೆ ಪ್ರವೇಶಿಸಿದೆ.
ಭಾರತದ ತವರಿನ ಅಂಗಳದಲ್ಲಿ ನಡೆಯುತ್ತಿರುವ ಈ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು, ಸಾತ್ವಿಕ್–ಚಿರಾಗ್ ಸೇರಿದಂತೆ ಪ್ರಮುಖ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.


