ಫಿಫಾ ವಿಶ್ವಕಪ್ 2026ರಲ್ಲಿ ಅಚ್ಚರಿಯ ಫಲಿತಾಂಶಗಳು ಮುಂದುವರಿದಿದ್ದು, ಜಾಗತಿಕ ಫುಟ್‌ಬಾಲ್ ಶಕ್ತಿಯಾಗಿರುವ ಸ್ಪೇನ್ ವಿರುದ್ಧ ಕೇಪ್ ವರ್ಡೆ ತಂಡ ಗೋಲುರಹಿತ ಡ್ರಾ ಸಾಧಿಸಿ ಎಲ್ಲರ ಗಮನ ಸೆಳೆದಿದೆ.
ಸ್ಪೇನ್‌ನ ನಿರಂತರ ದಾಳಿಗಳನ್ನು ಯಶಸ್ವಿಯಾಗಿ ತಡೆದ ಕೇಪ್ ವರ್ಡೆಯ 40 ವರ್ಷದ ಅನುಭವಿ ಗೋಲ್‌ಕೀಪರ್ ವೊಜಿನ್ಹಾ ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಹಲವು ಖಚಿತ ಗೋಲುಗಳನ್ನು ತಡೆದು ತಂಡಕ್ಕೆ ಅಮೂಲ್ಯ ಅಂಕ ತಂದುಕೊಟ್ಟರು.
ಇದೇ ವೇಳೆ, ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಕ್ರೀಡಾಂಗಣದಲ್ಲಿ ನಡೆದ ಗುಂಪು ‘ಜಿ’ಯ ಆರಂಭಿಕ ಪಂದ್ಯದಲ್ಲಿ ಇರಾನ್ ಮತ್ತು ನ್ಯೂಜಿಲೆಂಡ್ ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿದವು. ರೋಚಕ ತಿರುವುಗಳಿಂದ ಕೂಡಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಎಲಿಜಾ ಜಸ್ಟ್ ಎರಡು ಗೋಲುಗಳನ್ನು ದಾಖಲಿಸಿ ಎರಡು ಬಾರಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಪ್ರತೀ ಬಾರಿಯೂ ಇರಾನ್ ತಿರುಗೇಟು ನೀಡಿ ಸಮಬಲ ಸಾಧಿಸಿತು.
ಸಿಯಾಟಲ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಗುಂಪು ‘ಜಿ’ ಪಂದ್ಯದಲ್ಲಿ ಬೆಲ್ಜಿಯಂ ಮತ್ತು ಈಜಿಪ್ಟ್ ತಂಡಗಳು 1-1 ಗೋಲುಗಳ ಡ್ರಾ ಫಲಿತಾಂಶ ಕಂಡವು. ವಿಶ್ವಕಪ್ ಇತಿಹಾಸದಲ್ಲೇ ಮೊದಲ ಜಯದ ಕನಸಿನಲ್ಲಿದ್ದ ಈಜಿಪ್ಟ್‌ಗೆ ಬೆಲ್ಜಿಯಂ ಬದಲಿ ಆಟಗಾರರು ಕೊನೆಯ ಕ್ಷಣದಲ್ಲಿ ಆಘಾತ ನೀಡಿದರು. ಈಜಿಪ್ಟ್‌ನ ಇಮಾಮ್ ಅಶೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನೊಂದೆಡೆ, ಅಮೆರಿಕದ ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಗುಂಪು ‘ಎಚ್’ ಪಂದ್ಯದಲ್ಲಿ ಸೌದಿ ಅರೇಬಿಯಾ ಮತ್ತು ಉರುಗ್ವೆ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದವು. ಸೌದಿ ಅರೇಬಿಯಾ ಪರ ಅಬ್ದುಲೆಲಾಹ್ ಅಲ್-ಅಮ್ರಿ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಉರುಗ್ವೆಯ ಮ್ಯಾಕ್ಸಿ ಅರೌಜೊ 80ನೇ ನಿಮಿಷದಲ್ಲಿ ಸಮಬಲದ ಗೋಲು ಬಾರಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ವಿಶ್ವಕಪ್ ಆರಂಭಿಕ ಹಂತದಲ್ಲೇ ಅಚ್ಚರಿಯ ಫಲಿತಾಂಶಗಳು ಹಾಗೂ ಜಿದ್ದಾಜಿದ್ದಿನ ಪೈಪೋಟಿಗಳು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.


