ಭಾರತ–ಬ್ರೆಜಿಲ್ ಫುಟ್‌ಬಾಲ್ ಸ್ನೇಹಪೂರ್ವಕ ಪಂದ್ಯಕ್ಕೆ ದಿನಾಂಕ ನಿಗದಿ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮುಖಾಮುಖಿ

1 Min Read
1 Min Read

ನವದೆಹಲಿ: ಭಾರತೀಯ ಫುಟ್‌ಬಾಲ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಐದು ಬಾರಿ ಫಿಫಾ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ ತಂಡವು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಸ್ನೇಹಪೂರ್ವಕ ಫುಟ್‌ಬಾಲ್ ಪಂದ್ಯ ಆಡಲಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದು, ಪಂದ್ಯವು ಅಕ್ಟೋಬರ್ 3ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬ್ರೆಜಿಲ್ ಫುಟ್‌ಬಾಲ್ ಒಕ್ಕೂಟದ (CBF) ಮಾಹಿತಿ ಪ್ರಕಾರ, ಬ್ರೆಜಿಲ್ ತಂಡವು ಮೊದಲು ಆಸ್ಟ್ರೇಲಿಯಾ ವಿರುದ್ಧ ಎರಡು ಸ್ನೇಹಪೂರ್ವಕ ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್ 25ರಂದು ಟೌನ್ಸ್‌ವಿಲ್ಲೆಯಲ್ಲಿ ಮೊದಲ ಪಂದ್ಯ ಹಾಗೂ ಸೆಪ್ಟೆಂಬರ್ 29ರಂದು ಬ್ರಿಸ್ಬೇನ್‌ನಲ್ಲಿ ಎರಡನೇ ಪಂದ್ಯ ನಡೆಯಲಿದೆ. ನಂತರ ಬ್ರೆಜಿಲ್ ತಂಡ ಭಾರತ ವಿರುದ್ಧದ ಪಂದ್ಯಕ್ಕಾಗಿ ಕೋಲ್ಕತ್ತಾಗೆ ಆಗಮಿಸಲಿದೆ.

ವಿಶೇಷವೆಂದರೆ, ಭಾರತ ಮತ್ತು ಬ್ರೆಜಿಲ್‌ನ ಹಿರಿಯ ಪುರುಷರ ರಾಷ್ಟ್ರೀಯ ಫುಟ್‌ಬಾಲ್ ತಂಡಗಳು ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಲಿವೆ. ಈ ಐತಿಹಾಸಿಕ ಪಂದ್ಯವು ಭಾರತೀಯ ಫುಟ್‌ಬಾಲ್‌ಗೆ ಮಹತ್ವದ ಕ್ಷಣವಾಗಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ.

Share This Article