ಲಖಿಸರಾಯ್: ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರದ ಅಂಗವಾಗಿ ಅಶೋಕ್ ಧಾಮ್ ದೇವಸ್ಥಾನದಲ್ಲಿ ಜಮಾಯಿಸಿದ್ದ ಭಕ್ತರ ನಡುವೆ ಕಾಲ್ತುಳಿತ ಸಂಭವಿಸಿದ್ದು, ಏಳು ಮಹಿಳಾ ಭಕ್ತರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವನಿಗೆ ಜಲಾಭಿಷೇಕ ನೆರವೇರಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಇತರ ಗಾಯಾಳುಗಳಿಗೆ ಲಖಿಸರಾಯ್ ಜಿಲ್ಲಾ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿದ್ಯುತ್ ಕಂಬದ ಬಗ್ಗೆ ವದಂತಿಯಿಂದ ಗೊಂದಲ?
ವರದಿಗಳ ಪ್ರಕಾರ, ಇಂದು ಬೆಳಗ್ಗೆ ಅಶೋಕ್ ಧಾಮ್ ರೈಲು ನಿಲ್ದಾಣದಿಂದ ದೇವಸ್ಥಾನದತ್ತ ಸಾಗುವ ಮಾರ್ಗದಲ್ಲಿ ಕಾಲ್ತುಳಿತ ಸಂಭವಿಸಿದೆ. ಬಿದ್ದಿದ್ದ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸುತ್ತಿದೆ ಎಂಬ ವದಂತಿ ಹರಡಿದ ಬಳಿಕ ಭಕ್ತರಲ್ಲಿ ಆತಂಕ ಮತ್ತು ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನೆಯ ಬಳಿಕ ಸ್ಥಳೀಯ ಆಡಳಿತ ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಿಎಂ ಸಂತಾಪ
ಘಟನೆಗೆ ಬಿಹಾರ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ತ್ವರಿತ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ದುರಂತದಿಂದಾಗಿ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಧೈರ್ಯ ನೀಡಲಿ ಹಾಗೂ ಈ ಕಷ್ಟದ ಸಮಯದಲ್ಲಿ ಎಲ್ಲರೂ ಸ್ಥೈರ್ಯದಿಂದ ಇರುವಂತಾಗಲಿ ಎಂದು ರಾಜನಾಥ್ ಸಿಂಗ್ ಪ್ರಾರ್ಥಿಸಿದ್ದಾರೆ.


