ಗ್ರಾಮೀಣ ಮಕ್ಕಳ ಜ್ಞಾನಕ್ಕೆ ಹೊಸ ಸೇತುವೆ: ‘ಗ್ರಾಮೀಣ ಜ್ಞಾನ ಸೇತು’ ಆ್ಯಪ್‌ ಬಿಡುಗಡೆ ಮಾಡಿದ ಅಮಿತ್ ಶಾ

2 Min Read
2 Min Read

ಗಾಂಧೀನಗರ: ಗ್ರಾಮೀಣ ಪ್ರದೇಶಗಳಲ್ಲಿನ ಗ್ರಂಥಾಲಯಗಳನ್ನು ಒಂದೇ ವೇದಿಕೆಗೆ ಸಂಪರ್ಕಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಗ್ರಾಮೀಣ ಜ್ಞಾನ ಸೇತು’ ಆ್ಯಪ್‌ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು.

ಗುಜರಾತ್‌ನ ಗಾಂಧೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳನ್ನು ಪರಸ್ಪರ ಸಂಪರ್ಕಿಸುವ ಉದ್ದೇಶದಿಂದ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಪದ್ಮಶ್ರೀ ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಗ್ರಂಥಾಲಯ ದಿನದಂದು ಆ್ಯಪ್‌ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಪ್ರತಿ ಗ್ರಾಮದಲ್ಲೂ, ಅದರಲ್ಲೂ ಶಾಲೆಗಳ ಸಮೀಪದಲ್ಲಿ ಗ್ರಂಥಾಲಯ ಸ್ಥಾಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಮಕ್ಕಳಲ್ಲಿ ಓದುವ ಹವ್ಯಾಸ ಮತ್ತು ಕಲಿಕೆಯ ಆಸಕ್ತಿಯನ್ನು ಬೆಳೆಸಲು ಗ್ರಾಮೀಣ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ತಿಳಿಸಿದರು.

ಈಗಾಗಲೇ ಸುಮಾರು 63 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು, 752 ಗ್ರಂಥಾಲಯಗಳು ‘ಗ್ರಾಮೀಣ ಜ್ಞಾನ ಸೇತು’ ಆ್ಯಪ್‌ಗೆ ಸಂಪರ್ಕಗೊಂಡಿವೆ ಎಂದು ಅಮಿತ್ ಶಾ ಮಾಹಿತಿ ನೀಡಿದರು. ಅಲ್ಲದೆ, ಒಟ್ಟು ಸುಮಾರು 2.80 ಲಕ್ಷ ಪುಸ್ತಕಗಳನ್ನು ಹೊಂದಿರುವ ನಾಲ್ಕು ಗ್ರಂಥಾಲಯಗಳನ್ನು ಗ್ರಾಮೀಣ ಗ್ರಂಥಾಲಯಗಳೊಂದಿಗೆ ಜೋಡಿಸಲಾಗಿದೆ ಎಂದರು.

ಗ್ರಾಮಗಳಿಗೆ ಪುಸ್ತಕಗಳ ಸುಲಭ ಲಭ್ಯತೆ ಕಲ್ಪಿಸಲು ತಮ್ಮ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ (MPLADS) ಮೂಲಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳು ಪ್ರತಿ 15 ದಿನಗಳಿಗೊಮ್ಮೆ ಗ್ರಾಮಗಳಿಗೆ ತೆರಳಿ, ಓದುಗರು ಪಡೆದಿರುವ ಪುಸ್ತಕಗಳನ್ನು ಸಂಗ್ರಹಿಸುವುದರ ಜೊತೆಗೆ ಆ್ಯಪ್‌ ಮೂಲಕ ಬೇಡಿಕೆ ಸಲ್ಲಿಸಲಾದ ಪುಸ್ತಕಗಳನ್ನು ಗ್ರಾಮಗಳಿಗೆ ತಲುಪಿಸಲಿವೆ ಎಂದು ಅವರು ವಿವರಿಸಿದರು.

ಈ ಯೋಜನೆಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಓದುವ ಅವಕಾಶ ದೊರೆಯಲಿದೆ ಎಂದು ಅಮಿತ್ ಶಾ ಹೇಳಿದರು. ಮಕ್ಕಳ ವ್ಯಕ್ತಿತ್ವ ವಿಕಸನ, ಜ್ಞಾನಾರ್ಜನೆ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುವಲ್ಲಿ ಓದುವ ಹವ್ಯಾಸ ಮತ್ತು ಸಮರ್ಥ ಗ್ರಂಥಪಾಲಕರ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.

ಕುಟುಂಬದ ಸದಸ್ಯರು, ವಿಶೇಷವಾಗಿ ಗೃಹಿಣಿಯರು, ಬಿಡುವಿನ ಸಮಯವನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು. ಮಕ್ಕಳಲ್ಲೂ ಓದುವ ಮತ್ತು ಅಧ್ಯಯನ ಮಾಡುವ ಆಸಕ್ತಿಯನ್ನು ಬೆಳೆಸಬೇಕು ಎಂದು ಅಮಿತ್ ಶಾ ಕರೆ ನೀಡಿದರು.

Share This Article