ಪಾಕ್ ಆಕ್ರಮಿತ ಕಾಶ್ಮೀರದ ಸ್ಥಳೀಯ ಚುನಾವಣೆ ‘ನಾಟಕ’: ಭಾರತದಿಂದ ತೀವ್ರ ಟೀಕೆ

2 Min Read
2 Min Read

ನವದೆಹಲಿ: ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ (PoJK) ನಡೆಯುತ್ತಿರುವ ಸ್ಥಳೀಯ ಚುನಾವಣೆಗಳನ್ನು ಭಾರತ ‘ಸಂಪೂರ್ಣ ನಾಟಕ’ ಎಂದು ಟೀಕಿಸಿದೆ. ಇಂತಹ ಚುನಾವಣಾ ಪ್ರಕ್ರಿಯೆಗಳ ಮೂಲಕ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕ್ ಆಕ್ರಮಿತ ಪ್ರದೇಶದಲ್ಲಿ ಸಾರ್ವಜನಿಕರ ಪ್ರತಿಭಟನೆಗಳು ಹಾಗೂ ಪಾಕಿಸ್ತಾನಿ ಪಡೆಗಳಿಂದ ನಡೆಯುತ್ತಿರುವ ಹಿಂಸಾಚಾರವೇ ವಾಸ್ತವ ಸ್ಥಿತಿ ಎಂದು ಹೇಳಿದ್ದಾರೆ.

ಕಳೆದ ಜೂನ್‌ನಿಂದ ಅಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಮುಂದುವರಿದಿರುವ ದಮನಕಾರಿ ಕ್ರಮಗಳ ನಡುವೆ ಕನಿಷ್ಠ 90 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಅಸಮಾಧಾನಕ್ಕೆ ಪಾಕಿಸ್ತಾನಿ ಆಡಳಿತವು ಗುಂಡಿನ ದಾಳಿ, ಬ್ಲ್ಯಾಕ್‌ಔಟ್, ಬೆದರಿಕೆ ಹಾಗೂ ದಮನದ ಮೂಲಕ ಪ್ರತಿಕ್ರಿಯಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜನರ ಅಸಮಾಧಾನವನ್ನು ಪರಿಹರಿಸುವ ಬದಲು ಚುನಾವಣೆಯ ಮೂಲಕ ಕೃತಕವಾಗಿ ಜನಮನ್ನಣೆ ಪಡೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. ಪಾಕಿಸ್ತಾನ ತನ್ನ ಕ್ರಮಗಳಿಗೆ ಹೊಣೆಗಾರನಾಗಬೇಕು ಮತ್ತು ಮಾನವ ಹಕ್ಕುಗಳ ಕುರಿತು ನೀಡುತ್ತಿರುವ ಹೇಳಿಕೆಗಳಲ್ಲಿನ ದ್ವಂದ್ವವನ್ನು ಅಂತರರಾಷ್ಟ್ರೀಯ ಸಮುದಾಯ ಗಮನಿಸಬೇಕು ಎಂದು ಅವರು ತಿಳಿಸಿದ್ದಾರೆ.

BRICS ಶೃಂಗಸಭೆಗೆ ಬಾಂಗ್ಲಾದೇಶಕ್ಕೆ ಆಹ್ವಾನ

ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ BRICS ಶೃಂಗಸಭೆಗೆ ಬಾಂಗ್ಲಾದೇಶದ ಪ್ರಧಾನಮಂತ್ರಿಗೆ ಆಹ್ವಾನ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಸ್ವಾಲ್, ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಮಂತ್ರಿ ತಾರಿಕ್ ರಹ್ಮಾನ್ ಅವರಿಗೆ ಭಾರತದಿಂದ ದ್ವಿಪಕ್ಷೀಯ ಭೇಟಿಗಾಗಿ ಪ್ರತ್ಯೇಕವಾಗಿ ಅಧಿಕೃತ ಆಹ್ವಾನ ನೀಡಲಾಗಿತ್ತು ಎಂದು ತಿಳಿಸಿದರು.

BRICS ಶೃಂಗಸಭೆಯ ವಿಚಾರದಲ್ಲಿ, ಪ್ರಸ್ತುತ BIMSTEC ಅಧ್ಯಕ್ಷರಾಗಿರುವ ಬಾಂಗ್ಲಾದೇಶದ ಪ್ರಧಾನಮಂತ್ರಿಯನ್ನು 18ನೇ BRICS ಶೃಂಗಸಭೆಯ ಔಟ್‌ರೀಚ್ ಅಧಿವೇಶನದಲ್ಲಿ ಭಾಗವಹಿಸುವಂತೆ ಭಾರತ ಪ್ರತ್ಯೇಕ ಆಹ್ವಾನ ನೀಡಿದೆ ಎಂದು ಅವರು ಹೇಳಿದರು.

BRICSನ ಔಟ್‌ರೀಚ್ ಅಧಿವೇಶನಗಳಿಗೆ ಪ್ರಾದೇಶಿಕ ಸಂಘಟನೆಗಳ ಮುಖ್ಯಸ್ಥರನ್ನು ಆಹ್ವಾನಿಸುವುದು ಸಾಮಾನ್ಯವಾಗಿ ಅನುಸರಿಸಲಾಗುತ್ತಿರುವ ಪದ್ಧತಿಯಾಗಿದೆ. ಇದೇ ರೀತಿಯಲ್ಲಿ ಇತರ ಪ್ರಾದೇಶಿಕ ಸಂಘಟನೆಗಳ ಮುಖ್ಯಸ್ಥರಿಗೂ ಆಹ್ವಾನ ನೀಡಲಾಗಿದೆ ಎಂದು ಜೈಸ್ವಾಲ್ ವಿವರಿಸಿದರು.

ಶೇಖ್ ಹಸೀನಾ ಕಾರ್ಯಕ್ರಮದ ಕುರಿತು ಸ್ಪಷ್ಟನೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಮಾಧ್ಯಮ ಸಂವಾದದ ಕುರಿತು ಕೇಳಿದ ಪ್ರಶ್ನೆಗೆ, ಈ ಕಾರ್ಯಕ್ರಮವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸುತ್ತಿದೆ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದರು.

ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಕಾರ್ಯಕ್ರಮದಲ್ಲಿ ವ್ಯಕ್ತವಾಗಬಹುದಾದ ಯಾವುದೇ ಅಭಿಪ್ರಾಯಗಳನ್ನು ಸರ್ಕಾರ ಬೆಂಬಲಿಸುವುದಿಲ್ಲ ಅಥವಾ ಅವುಗಳಿಗೆ ತನ್ನ ಅನುಮೋದನೆ ನೀಡುವುದಿಲ್ಲ ಎಂದು ಅವರು ತಿಳಿಸಿದರು.

Share This Article