ವಿಯೆನ್ನಾ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಉಕ್ರೇನ್‌ನ ಝಪೊರಿಜ್ಝಿಯಾ ಅಣು ವಿದ್ಯುತ್ ಸ್ಥಾವರ (Zaporizhzhia Nuclear Power Plant – ZNPP) ಮತ್ತೊಮ್ಮೆ ಬಾಹ್ಯ ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು, ಯುದ್ಧ ಆರಂಭವಾದ ಬಳಿಕ ಇದು 21ನೇ ಘಟನೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ತಿಳಿಸಿದೆ.
IAEA ಪ್ರಕಾರ, ಸೇನಾ ಚಟುವಟಿಕೆಗಳಿಂದ ಉಂಟಾದ ಹಾನಿಯ ಪರಿಣಾಮ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ತಕ್ಷಣವೇ ತುರ್ತು ಡೀಸೆಲ್ ಜನರೇಟರ್‌ಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಿ, ರಿಯಾಕ್ಟರ್‌ಗಳ ತಂಪುಗೊಳಿಸುವ ವ್ಯವಸ್ಥೆ ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳಿಗೆ ವಿದ್ಯುತ್ ಪೂರೈಸಿವೆ.
IAEA ಮಹಾನಿರ್ದೇಶಕ ರಫೇಲ್ ಗ್ರೋಸಿ ಈ ಬೆಳವಣಿಗೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಝಪೊರಿಜ್ಝಿಯಾ ಅಣುಸ್ಥಾವರದ ಸುರಕ್ಷತೆ ಇನ್ನೂ ಅತ್ಯಂತ ಸೂಕ್ಷ್ಮ ಸ್ಥಿತಿಯಲ್ಲಿದೆ ಎಂದು ಎಚ್ಚರಿಸಿದ್ದಾರೆ.
ಯುದ್ಧ ಪ್ರದೇಶದ ಸುತ್ತಮುತ್ತ ಸೇನಾ ಚಟುವಟಿಕೆಗಳಲ್ಲಿ ಗರಿಷ್ಠ ಸಂಯಮ ವಹಿಸುವಂತೆ ಅವರು ಎರಡೂ ರಾಷ್ಟ್ರಗಳಿಗೆ ಮನವಿ ಮಾಡಿದ್ದು, ಯಾವುದೇ ಅಣು ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದಾರೆ.
ಯುರೋಪಿನ ಅತಿದೊಡ್ಡ ಅಣು ವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿರುವ ಝಪೊರಿಜ್ಝಿಯಾ, ರಷ್ಯಾ-ಉಕ್ರೇನ್ ಸಂಘರ್ಷ ತೀವ್ರಗೊಂಡ ಬಳಿಕ ಹಲವು ಬಾರಿ ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು, ಇದು ಜಾಗತಿಕ ಮಟ್ಟದಲ್ಲಿ ಅಣು ಸುರಕ್ಷತೆ ಕುರಿತ ಆತಂಕವನ್ನು ಹೆಚ್ಚಿಸಿದೆ.


