23ನೇ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games 2026) ಇಂದು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಆರಂಭವಾಗಲಿದೆ. 10 ದಿನಗಳ ಈ ಕ್ರೀಡಾ ಮಹಾಕೂಟದಲ್ಲಿ 74 ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಭಾರತದ ಪರ ಒಲಿಂಪಿಕ್ ಪದಕ ವಿಜೇತರಾದ ನೀರಜ್ ಚೋಪ್ರಾ, ಮೀರಾಬಾಯಿ ಚಾನು ಹಾಗೂ ಲವ್ಲಿನಾ ಬೊರ್ಗೊಹೈನ್ ಸೇರಿದಂತೆ ಹಲವು ಪ್ರಮುಖ ಕ್ರೀಡಾಪಟುಗಳು ಪದಕ ಬೇಟೆಗೆ ಸಜ್ಜಾಗಿದ್ದಾರೆ.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 10 ಕ್ರೀಡೆಗಳು ಮಾತ್ರ ನಡೆಯಲಿವೆ. ಬರ್ಮಿಂಗ್‌ಹ್ಯಾಮ್ 2022 ಕ್ರೀಡಾಕೂಟಕ್ಕೆ ಹೋಲಿಸಿದರೆ ಒಂಬತ್ತು ಕ್ರೀಡೆಗಳು ಕಡಿಮೆಯಾಗಿದ್ದು, ಎಲ್ಲಾ ಸ್ಪರ್ಧೆಗಳು ಸುಮಾರು ಎಂಟು ಮೈಲಿ ವ್ಯಾಪ್ತಿಯೊಳಗಿನ ನಾಲ್ಕು ಪ್ರಮುಖ ಕ್ರೀಡಾಂಗಣಗಳಲ್ಲಿ ನಡೆಯಲಿವೆ.
ಈ ಬಾರಿ ಅಥ್ಲೆಟಿಕ್ಸ್, ಈಜು, 3×3 ಬಾಸ್ಕೆಟ್‌ಬಾಲ್, ಟ್ರ್ಯಾಕ್ ಸೈಕ್ಲಿಂಗ್, ವೇಟ್‌ಲಿಫ್ಟಿಂಗ್, ಬೌಲ್ಸ್, ಕಲಾತ್ಮಕ ಜಿಮ್ನಾಸ್ಟಿಕ್ಸ್, ನೆಟ್‌ಬಾಲ್, ಬಾಕ್ಸಿಂಗ್ ಹಾಗೂ ಜುಡೋ ಸ್ಪರ್ಧೆಗಳು ಮಾತ್ರ ಆಯೋಜಿಸಲಾಗಿದೆ.
ಭಾರತದ ತಂಡದಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಸೇರಿದಂತೆ ಒಟ್ಟು 125 ಸದಸ್ಯರು ಇದ್ದಾರೆ.
ಕಳೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 61 ಪದಕಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಸ್ಪರ್ಧೆಗಳ ಸಂಖ್ಯೆ ಹಾಗೂ ಪದಕ ವಿಭಾಗಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಭಾರತದ ಮುಂದೆ ವಿಭಿನ್ನ ಸವಾಲು ಎದುರಾಗಿದೆ.


