ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ‘ಅಯೋಗ್ಯ 2’ ಚಿತ್ರದ ಮೂರನೇ ಹಾಡು ‘ಹುಡ್ಗೀರ್ ಡೇಂಜರಸ್’ (Hudgir Dangerous) ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಆಗಸ್ಟ್ 7ರಂದು ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆ, ಈ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹುಬ್ಬಳ್ಳಿಯಲ್ಲಿ ನಡೆದ ಅಭಿಮಾನಿಗಳ ವಿಶೇಷ ಕಾರ್ಯಕ್ರಮದಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ನೀನಾಸಂ, “ಮೊದಲ ‘ಅಯೋಗ್ಯ’ ಒಂದು ಹಳ್ಳಿಯ ಕಥೆಯಾಗಿದ್ದರೆ, ‘ಅಯೋಗ್ಯ 2’ ಕರ್ನಾಟಕದ ಪ್ರತಿಯೊಂದು ಹಳ್ಳಿಗೂ ಸಂಬಂಧಿಸಿದ ಕಥೆಯನ್ನು ಹೇಳಲಿದೆ” ಎಂದು ಹೇಳಿದರು.
ಈಗಾಗಲೇ ಬಿಡುಗಡೆಯಾಗಿರುವ ಸಿದ್ಧ್ ಶ್ರೀರಾಮ್ ಧ್ವನಿಯ ‘ಮುದ್ದು ಮುದ್ದು ಪುಟ್ ಲಕ್ಷ್ಮಿ’ ಹಾಗೂ ಆಂಥೋನಿ ದಾಸನ್ ಹಾಡಿರುವ ‘ಅಣ್ಣ ಬಂದ್ರೆ ಜೋಶ್ ಬತ್ತದೆ’ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇದೀಗ ‘ಹುಡ್ಗೀರ್ ಡೇಂಜರಸ್’ ಚಿತ್ರದ ಸಂಗೀತದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.
ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಬಹದ್ದೂರ್ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ತಮ್ಮ ವಿಶಿಷ್ಟ ಶೈಲಿಯಲ್ಲಿ ಹಾಡಿಗೆ ಜೀವ ತುಂಬಿದ್ದಾರೆ. ಸಂತೋಷ್ ನೃತ್ಯ ಸಂಯೋಜಿಸಿರುವ ಈ ಹಾಡು ಪ್ರೇಕ್ಷಕರನ್ನು ರಂಜಿಸುವ ಮಾಸ್ ನಂಬರ್ ಆಗಿದೆ.
ಎಸ್‌ವಿಸಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ನಿರ್ಮಿಸಿರುವ ಈ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ಬಳಿಕ, ಇನ್ನಷ್ಟು ದೊಡ್ಡ ಕಥಾಹಂದರ ಹಾಗೂ ಭಾವನಾತ್ಮಕ ನಿರೂಪಣೆಯೊಂದಿಗೆ ‘ಅಯೋಗ್ಯ 2’ ಪ್ರೇಕ್ಷಕರ ಮುಂದೆ ಬರುತ್ತಿದೆ.
ನಟಿ ರಚಿತಾ ರಾಮ್, ಮೊದಲ ಭಾಗದಂತೆಯೇ ಈ ಚಿತ್ರದಲ್ಲೂ ನಟಿಸಿರುವ ಸಂತಸ ವ್ಯಕ್ತಪಡಿಸಿ, “‘ಅಯೋಗ್ಯ’ ಮತ್ತು ‘ಅಯೋಗ್ಯ 2’ ಎರಡೂ ಚಿತ್ರಗಳಲ್ಲಿ ಅಭಿನಯಿಸಿರುವುದು ಖುಷಿಯ ಸಂಗತಿ. ಚಿತ್ರಮಂದಿರದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ಕಾತರಳಾಗಿದ್ದೇನೆ” ಎಂದು ಹೇಳಿದರು.
ನಿರ್ದೇಶಕ ಮಹೇಶ್ ಕುಮಾರ್, “ನಮ್ಮ ಪಾಲಿಗೆ ಪ್ರೇಕ್ಷಕರೇ ನಿಜವಾದ ವಿಐಪಿಗಳು. ಆದ್ದರಿಂದಲೇ ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಮೊದಲ ಚಿತ್ರದಂತೆಯೇ ‘ಅಯೋಗ್ಯ 2’ಗೂ ಪ್ರೇಕ್ಷಕರು ಪ್ರೀತಿ ತೋರುತ್ತಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ಚಿತ್ರದಲ್ಲಿ ರವಿಶಂಕರ್, ಸಾಧು ಕೋಕಿಲ, ಟಬಲಾ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಮಸ್ತಿ ಉಪ್ಪಾರಹಳ್ಳಿ ಸಂಭಾಷಣೆ, ‘ಶಾಖಾಹಾರಿ’ ಖ್ಯಾತಿಯ ವಿಶ್ವಜಿತ್ ರಾವ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.


