ಟಾಲಿವುಡ್ನ ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮ ಮುಂದಿನ ತೆಲುಗು ಚಿತ್ರ “ಮಾ ಇಂಟಿ ಬಂಗಾರಂ” ಚಿತ್ರೀಕರಣಕ್ಕಾಗಿ ಕರ್ನಾಟಕದ ಮಲೆನಾಡಿನ ಹಸಿರು ನಾಡಾದ ಶಿವಮೊಗ್ಗ ಜಿಲ್ಲೆಯಲ್ಲಿ ಮೌನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಹೊಸನಗರ ತಾಲ್ಲೂಕು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.
ಚಿತ್ರತಂಡ ಯಾವುದೇ ಅಧಿಕೃತ ಘೋಷಣೆಗಳಿಲ್ಲದೆ ಮಲೆನಾಡಿನ ನೈಸರ್ಗಿಕ ಸೌಂದರ್ಯದ ಮಧ್ಯೆ ಶೂಟಿಂಗ್ ನಡೆಸುತ್ತಿದೆ. ಇತ್ತೀಚೆಗೆ ಚಿತ್ರೀಕರಣದ ಮಧ್ಯೆ ಹೋಳಿ ಹಬ್ಬವನ್ನು ಚಿತ್ರತಂಡ ಸಂಭ್ರಮದಿಂದ ಆಚರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.
ಹೋಳಿ ಸಂಭ್ರಮದ ವೇಳೆ ಸಮಂತಾ ಕೂಡ ತಂಡದವರೊಂದಿಗೆ ಉತ್ಸಾಹದಿಂದ ಭಾಗವಹಿಸಿದರು. ಕೈಯಲ್ಲಿ ಪಿಚ್ಕಾರಿ ಹಿಡಿದು ಸಹನಟರ ಮೇಲೆ ಬಣ್ಣದ ನೀರನ್ನು ಸಿಂಪಡಿಸುತ್ತಿರುವ ಸಮಂತಾ, ಮತ್ತೊಂದೆಡೆ ಸಹ ಕಲಾವಿದರು ಬಣ್ಣದ ಬಲೂನ್ಗಳನ್ನು ಎರಚುತ್ತಾ ಸಂಭ್ರಮಿಸಿದ ದೃಶ್ಯಗಳು ಸೆಟ್ನಲ್ಲಿ ನಗೆಮುಗಿಲು ಮೂಡಿಸಿವೆ. ಕ್ಷಣಕಾಲ ಗಂಭೀರ ಚಿತ್ರೀಕರಣದ ವಾತಾವರಣವೇ ಬಣ್ಣಗಳ ಸಂಭ್ರಮದಲ್ಲಿ ತೇಲಿದಂತಾಯಿತು.
ಈ ವಿಡಿಯೋ ಮತ್ತು ಚಿತ್ರಗಳು ವೈರಲ್ ಆದ ನಂತರ, ಅವುಗಳ ಹಿನ್ನೆಲೆಯಲ್ಲಿದ್ದ ಹಸಿರು ಪ್ರಕೃತಿ ಶಿವಮೊಗ್ಗದ ಮಲೆನಾಡಿನದ್ದೇ ಎಂಬುದನ್ನು ಹಲವರು ಗುರುತಿಸಿದರು. ಆದರೆ ಚಿತ್ರತಂಡ ಇನ್ನೂ ಎಷ್ಟು ದಿನ ಕರ್ನಾಟಕದಲ್ಲಿ ಚಿತ್ರೀಕರಣ ಮುಂದುವರಿಯಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಚಿತ್ರದ ಕಥೆಯೂ ಕರ್ನಾಟಕದೊಂದಿಗೆ ಯಾವುದೇ ಸಂಬಂಧ ಹೊಂದಿದೆಯೇ ಎಂಬುದೂ ತಿಳಿದುಬಂದಿಲ್ಲ.
ಮಲೆನಾಡಿನ ಬೇಸಿಗೆ ತಾಪಮಾನವೂ ಸಮಂತಾಗೆ ಹೊಸ ಅನುಭವವನ್ನೇ ನೀಡಿದಂತಿದೆ. ಚಿತ್ರೀಕರಣ ಸ್ಥಳದಿಂದ ತೆಗೆದ ಸೆಲ್ಫಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಅವರು, “Summer has begun” ಎಂದು ಬರೆಯುತ್ತಾ ಶಿವಮೊಗ್ಗವನ್ನು ಟ್ಯಾಗ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಮಲೆನಾಡಿನ ಹೆಮ್ಮೆಯ ನಟ ದಿಗಂತ್ ಮಂಚಾಳೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಶಿವಮೊಗ್ಗದ ಚಿತ್ರೀಕರಣ ವೇಳಾಪಟ್ಟಿಗೆ ಅವರು ಈಗಾಗಲೇ ಸೇರಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಮೇ 15ರಂದು ವಿಶ್ವದಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದೆ. ಚಿತ್ರದ ಕಥೆಯನ್ನು ರಾಜ್ ನಿಧಿಮೋರು ಮತ್ತು ವಸಂತ್ ಮರಿಗಂಟಿ ರಚಿಸಿದ್ದು, ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.
ಚಿತ್ರದ ಬಗ್ಗೆ ಮುಂಚಿತವಾಗಿ ಮಾತನಾಡಿದ್ದ ಸಮಂತಾ, “ಮಾ ಇಂಟಿ ಬಂಗಾರಂ” ಒಂದು ಮಹಿಳೆಯ ಧೈರ್ಯ ಮಾತ್ರವಲ್ಲ, ಆಕೆಯ ಸೌಮ್ಯತೆ ಮತ್ತು ಮನಸ್ಸಿನ ಬಲವನ್ನೂ ಪ್ರತಿಬಿಂಬಿಸುವ ಕಥೆ ಎಂದು ಹೇಳಿದ್ದರು. ಕುಟುಂಬ ಸಂಬಂಧಗಳು ಮತ್ತು ಭಾವನಾತ್ಮಕ ಬಾಂಧವ್ಯಗಳನ್ನು ಸರಳ ಜೀವನದ ಕ್ಷಣಗಳ ಮೂಲಕ ವಿಭಿನ್ನ ಕಥನ ಶೈಲಿಯಲ್ಲಿ ಚಿತ್ರಿಸಲಾಗಿದೆ ಎಂದು ಅವರು ತಿಳಿಸಿದ್ದರು.
ಈ ಚಿತ್ರದಲ್ಲಿ ಸಮಂತಾ ರೂತ್ ಪ್ರಭು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಗುಲ್ಶನ್ ದೇವಯ್ಯ ತೆಲುಗು ಚಿತ್ರರಂಗಕ್ಕೆ ಮೊದಲ ಬಾರಿಗೆ ಪ್ರವೇಶಿಸುತ್ತಿದ್ದು, ದಿಗಂತ್ ಮಂಚಾಳೆ ಮತ್ತೊಮ್ಮೆ ತೆಲುಗು ಸಿನಿಮಾಗೆ ಮರಳುತ್ತಿದ್ದಾರೆ. ಜೊತೆಗೆ ಗೌತಮಿ ತಡಿಮಲ್ಲಾ, ಮಂಜುಷಾ ಮತ್ತು ಶ್ರೀಮುಖಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದು, ಓಂ ಪ್ರಕಾಶ್ ಛಾಯಾಗ್ರಹಣ ಹಾಗೂ ಧರ್ಮೇಂದ್ರ ಕಾಕರ್ಲಾ ಸಂಪಾದನೆ ಮಾಡಿದ್ದಾರೆ.


