ಅಮೆರಿಕ–ಇರಾನ್ ಸಂಘರ್ಷ ತೀವ್ರ: ಇರಾನ್ ಮೇಲೆ ಮತ್ತೊಂದು ಸುತ್ತಿನ ವೈಮಾನಿಕ ದಾಳಿ

1 Min Read
1 Min Read

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಅಮೆರಿಕ ಸೇನೆ ಇರಾನ್ ವಿರುದ್ಧ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ಆರಂಭಿಸಿದೆ. ಹೋರ್ಮುಜ್ ಜಲಸಂಧಿಯಲ್ಲಿನ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳಿಗೆ ಬಳಸಲಾಗುತ್ತಿರುವ ಇರಾನ್‌ನ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ದುರ್ಬಲಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಈ ಬೆಳವಣಿಗೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಅಮೆರಿಕದ ಸೈನಿಕರ ಮೇಲಿನ ದಾಳಿಗೆ ಇರಾನ್ ಹಲವು ಪಟ್ಟು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಜೋರ್ಡಾನ್‌ನಲ್ಲಿ ಇಬ್ಬರು ಹಾಗೂ ಇರಾಕ್‌ನಲ್ಲಿ ಒಬ್ಬರು ಸೇರಿ ಮೂವರು ಅಮೆರಿಕದ ಯೋಧರು ಮೃತಪಟ್ಟ ಘಟನೆ ಬಳಿಕ ಅಮೆರಿಕ ತನ್ನ ಸೇನಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ.

ಇದರ ಬೆನ್ನಲ್ಲೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಬಹ್ರೈನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಐಆರ್‌ಜಿಸಿ ಹೇಳಿಕೆಯ ಪ್ರಕಾರ, ಮೊದಲ ಹಂತದಲ್ಲಿ ಬಹ್ರೈನ್‌ನ ಅಲ್-ಸಖೀರ್ ವಾಯುನೆಲೆಯ ಡ್ರೋನ್ ನಿರ್ವಹಣಾ ಕೇಂದ್ರಗಳು ಗುರಿಯಾಗಿದ್ದವು. ಎರಡನೇ ಹಂತದಲ್ಲಿ ಬಹ್ರೈನ್‌ನ ಸಲ್ಮಾನ್ ಬಂದರಿನಲ್ಲಿರುವ ಟಾಸ್ಕ್ ಫೋರ್ಸ್-59 ನೌಕಾ ಸೌಲಭ್ಯಗಳಿಗೆ ಹಾನಿ ಉಂಟುಮಾಡಲಾಗಿದೆ ಎಂದು ತಿಳಿಸಿದೆ.

ಮೂರನೇ ಹಂತದಲ್ಲಿ ಕುವೈತ್‌ನ ಕ್ಯಾಂಪ್ ಅರಿಫ್ಜಾನ್ನಲ್ಲಿರುವ ಅಮೆರಿಕದ ವಿಶೇಷ ನೌಕಾಪಡೆಯ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಐಆರ್‌ಜಿಸಿ ಹೇಳಿದೆ.

ಇತ್ತ ಬಹ್ರೈನ್ ವಿದೇಶಾಂಗ ಸಚಿವಾಲಯ, ಇರಾನ್‌ನ ಪುನರಾವರ್ತಿತ ದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದು, ಅವು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಅಮಾಯಕ ಜನರ ಜೀವಕ್ಕೆ ಅಪಾಯ ತಂದೊಡ್ಡಿವೆ ಎಂದು ಆರೋಪಿಸಿದೆ.

ಕುವೈತ್ ಕೂಡ ತನ್ನ ನಾಗರಿಕ ವಿಮಾನ ಸಂಚಾರ ವ್ಯವಸ್ಥೆಯನ್ನು ಇರಾನ್‌ನ ಡ್ರೋನ್‌ಗಳು ಗುರಿಯಾಗಿಸಿದ್ದವೆಂದು ಆರೋಪಿಸಿದ್ದು, ಆದರೆ ವಿಮಾನ ಸಂಚಾರ ಸೇವೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Share This Article