ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ನಟನಾ ಶೈಲಿಯಿಂದ ಗುರುತಿಸಿಕೊಂಡಿರುವ ನಟಿ ಐಶ್ವರ್ಯಾ ರಾಜೇಶ್, ಮುಂದಿನ ದಿನಗಳಲ್ಲಿ ನೆಗೆಟಿವ್ ಛಾಯೆಯ ಪಾತ್ರಗಳಲ್ಲಿ ನಟಿಸುವ ಆಸೆ ಇರುವುದಾಗಿ ತಿಳಿಸಿದ್ದಾರೆ.
‘ಸಂಕ್ರಾಂತಿಕಿ ವಸ್ತುನ್ನಂ’ ಚಿತ್ರದ ಯಶಸ್ಸಿನ ಬಳಿಕ ತೆಲುಗಿನಲ್ಲಿ ಹಲವು ಸಿನಿಮಾಗಳಿಗೆ ಸಹಿ ಹಾಕಿರುವ ಐಶ್ವರ್ಯಾ, ಇತ್ತೀಚೆಗೆ ಬಿಡುಗಡೆಯಾದ ‘ಓ! ಸುಕುಮಾರಿ’ ಚಿತ್ರದ ಪ್ರಚಾರದ ವೇಳೆ ತಮ್ಮ ವೃತ್ತಿಜೀವನ, ಕಥೆಗಳ ಆಯ್ಕೆ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.
ಕಥೆಯೇ ನನ್ನ ಮೊದಲ ಆದ್ಯತೆ
ಖ್ಯಾತ ನಿರ್ದೇಶಕರ ಜೊತೆಗೆ ಹೊಸ ನಿರ್ದೇಶಕರ ಚಿತ್ರಗಳಲ್ಲೂ ನಟಿಸಿರುವ ಕುರಿತು ಮಾತನಾಡಿದ ಅವರು, ನಿರ್ದೇಶಕ ಹೊಸಬರೇ ಅಥವಾ ಅನುಭವಿಗಳೇ ಎಂಬುದು ಮುಖ್ಯವಲ್ಲ. ಕಥೆಯನ್ನು ಅವರು ಹೇಗೆ ನಿರೂಪಿಸುತ್ತಾರೆ ಮತ್ತು ಅವರ ಆತ್ಮವಿಶ್ವಾಸವೇ ನನ್ನನ್ನು ಸಿನಿಮಾ ಒಪ್ಪಿಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಸಿನಿಮಾ ಒಪ್ಪಿಕೊಳ್ಳುವ ಮುನ್ನ ತಮ್ಮ ತಂಡದೊಂದಿಗೆ ಕಥೆಯನ್ನು ಹಲವು ಗಂಟೆಗಳ ಕಾಲ ಚರ್ಚಿಸುವ ಅಭ್ಯಾಸವಿದೆ ಎಂದು ಅವರು ತಿಳಿಸಿದ್ದಾರೆ.
ಯಶಸ್ಸು-ವೈಫಲ್ಯ ಎರಡನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ
ಯಶಸ್ಸು ಮತ್ತು ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಐಶ್ವರ್ಯಾ, “ಒಂದು ವರ್ಷ ಐದು ಹಿಟ್ ಸಿನಿಮಾಗಳನ್ನು ನೀಡಿದ್ದೆ. ಆಗ ಮನೆ ತುಂಬಾ ಹೂಗುಚ್ಛಗಳಿಂದ ತುಂಬಿತ್ತು. ಮುಂದಿನ ವರ್ಷ ಕಡಿಮೆ ಹಿಟ್‌ಗಳಾಗಿದ್ದಾಗ ಹೂಗುಚ್ಛಗಳ ಸಂಖ್ಯೆಯೂ ಕಡಿಮೆಯಾಯಿತು. ಆದರೆ ಇದರಿಂದ ನನ್ನ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಆತ್ಮವಿಶ್ವಾಸದಿಂದ ಮುಂದೆ ಸಾಗುವುದನ್ನು ಕಲಿತಿದ್ದೇನೆ” ಎಂದು ಹೇಳಿದ್ದಾರೆ.
ತೆಲುಗಿನ ಯಾವುದೇ ಉಪಭಾಷೆ ಕಷ್ಟವಲ್ಲ
‘ಸಂಕ್ರಾಂತಿಕಿ ವಸ್ತುನ್ನಂ’ ಚಿತ್ರದಲ್ಲಿ ಗೋದಾವರಿ ಉಪಭಾಷೆ ಹಾಗೂ ‘ಓ! ಸುಕುಮಾರಿ’ಯಲ್ಲಿ ತೆಲಂಗಾಣ ಉಪಭಾಷೆಯಲ್ಲಿ ಸಂಭಾಷಣೆ ಹೇಳಿರುವ ಬಗ್ಗೆ ಮಾತನಾಡಿದ ಅವರು, “ನಾನು ತೆಲುಗು ಮೂಲದವಳಾಗಿರುವುದರಿಂದ ಯಾವುದೇ ತೆಲುಗು ಉಪಭಾಷೆ ಮಾತನಾಡಲು ಕಷ್ಟವಾಗುವುದಿಲ್ಲ” ಎಂದಿದ್ದಾರೆ.
OTTಗೂ ಹೆಚ್ಚಿನ ಆದ್ಯತೆ
ಚಿತ್ರಗಳ ಜೊತೆಗೆ OTT ವೇದಿಕೆಗಳಲ್ಲೂ ಸಕ್ರಿಯವಾಗಿರುವ ಐಶ್ವರ್ಯಾ, ‘ಸುಝಲ್’ ವೆಬ್ ಸರಣಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ಪ್ರೈಮ್ ವಿಡಿಯೊ ಹಾಗೂ ಜಿಯೋ ಹಾಟ್‌ಸ್ಟಾರ್ಗಾಗಿ ತಲಾ ಒಂದು ವೆಬ್ ಸರಣಿಯಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
ನೆಗೆಟಿವ್ ಪಾತ್ರಗಳಲ್ಲಿ ನಟಿಸುವ ಕನಸು
ಭವಿಷ್ಯದಲ್ಲಿ ಯಾವ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಐಶ್ವರ್ಯಾ, “ಇಲ್ಲಿಯವರೆಗೆ ನೆಗೆಟಿವ್ ಛಾಯೆಯ ಪಾತ್ರಗಳಲ್ಲಿ ಹೆಚ್ಚು ನಟಿಸಿಲ್ಲ. ‘ನೀಲಾಂಬರಿ’ಯಂತಹ ಪ್ರಭಾವಿ ಪಾತ್ರವನ್ನು ನಿರ್ವಹಿಸುವ ಆಸೆ ಇದೆ. ಜೊತೆಗೆ ‘ಒಬ್ಸೆಷನ್’ ಮಾದರಿಯ ಮನೋವೈಜ್ಞಾನಿಕ ಪಾತ್ರಗಳಲ್ಲೂ ನಟಿಸಲು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.


