‘ಡಿಸ್ಕೋ ರಾಣಿ’ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿರುವ ಮಲಯಾಳಂ ನಟ ಅಜು ವರ್ಗೀಸ್

1 Min Read
1 Min Read

ಬೆಂಗಳೂರು: ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಅಜು ವರ್ಗೀಸ್ ಅವರು ‘ಡಿಸ್ಕೋ ರಾಣಿ’ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ಸಂಜನ್ ಕಾಜೆ, ಫೈಸಲ್ ಮಲಿಕ್, ರವಿ ಕಾಳೆ, ಯೋಗರಾಜ್ ಭಟ್ ಹಾಗೂ ಪಲ್ಲವಿ ಮಂಜುನಾಥ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಡಿಸ್ಕೋ ರಾಣಿ’ ಚಿತ್ರವನ್ನು ಶಿವ ಶಂಕರ್ ಕಥೆ ಬರೆದು ನಿರ್ದೇಶಿಸುತ್ತಿದ್ದು, ಇದು ಅವರ ಮೊದಲ ಪೂರ್ಣಾವಧಿ ನಿರ್ದೇಶನದ ಸಿನಿಮಾ. ಇದಕ್ಕೂ ಮುನ್ನ ಅವರು ‘ಅರ್ಧ ಸತ್ಯ’ ಎಂಬ ಸಸ್ಪೆನ್ಸ್ ಕಿರುಚಿತ್ರವನ್ನು ನಿರ್ದೇಶಿಸಿದ್ದರೆ, ನಿರ್ದೇಶಕ ಸಾಗರ್ ಕುಮಾರ್ ಅವರ ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಚಿತ್ರದ ಶೀರ್ಷಿಕೆ ಅನಾವರಣದ ವೇಳೆ ಶಿವ ಶಂಕರ್, ಅಜು ವರ್ಗೀಸ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಸ್ವಾಗತಿಸುವುದರ ಜೊತೆಗೆ, ಚಿತ್ರರಂಗದಲ್ಲಿ ಅವರ 16 ವರ್ಷಗಳ ಯಶಸ್ವಿ ಪಯಣಕ್ಕೆ ಅಭಿನಂದನೆ ಸಲ್ಲಿಸಿದರು.

ನಟಿ ಪಲ್ಲವಿ ಮಂಜುನಾಥ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಪಯಣ ತನ್ನ ಪಾಲಿಗೆ ಬಹಳ ವಿಶೇಷವಾಗಿದ್ದು, ಪ್ರೇಕ್ಷಕರ ಪ್ರೀತಿ ಮತ್ತು ಆಶೀರ್ವಾದ ಸದಾ ಇರಲಿ ಎಂದು ಅವರು ಬರೆದುಕೊಂಡಿದ್ದಾರೆ.

ಅತ್ಯುತ್ತಮ ಪ್ರತಿಭೆಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನಿರ್ದೇಶಕ ಶಿವ ಶಂಕರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿರುವ ಅವರು, ಈ ಸಿನಿಮಾ ತಂಡದ ಎಲ್ಲರಿಗೂ ಯಶಸ್ಸು ತಂದುಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article