ದೆಹಲಿ ಸ್ಟಾರ್ಟ್‌ಅಪ್ ನೀತಿಗೆ ₹400 ಕೋಟಿ ಅನುಮೋದನೆ; ಯುವ ಉದ್ಯಮಿಗಳಿಗೆ ಭಾರಿ ಉತ್ತೇಜನ

1 Min Read
1 Min Read

ನವದೆಹಲಿ: ರಾಷ್ಟ್ರೀಯ ರಾಜಧಾನಿಯಲ್ಲಿ ಆವಿಷ್ಕಾರ, ಸಂಶೋಧನೆ, ಉದ್ಯಮಶೀಲತೆ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದೆಹಲಿ ಸರ್ಕಾರ ‘ದೆಹಲಿ ಸ್ಟಾರ್ಟ್‌ಅಪ್ ಮತ್ತು ಇನ್‌ಕ್ಯುಬೇಷನ್ ನೀತಿ’ಗೆ ಅನುಮೋದನೆ ನೀಡಿದೆ. ಈ ನೀತಿಯಡಿ ಮುಂದಿನ ಐದು ವರ್ಷಗಳಲ್ಲಿ ₹400 ಕೋಟಿ ಹೂಡಿಕೆ ಮಾಡಲಾಗುತ್ತದೆ.

ನೀತಿಯ ಮೊದಲ ಹಂತದಲ್ಲಿ 11 ರಾಜ್ಯ ವಿಶ್ವವಿದ್ಯಾಲಯಗಳು, 13 ಸರ್ಕಾರಿ ಅನುದಾನಿತ ಕಾಲೇಜುಗಳು, ಪಾಲಿಟೆಕ್ನಿಕ್ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ITI) ಹಾಗೂ ಸರ್ಕಾರಿ ಶಾಲೆಗಳಲ್ಲಿ ಯೋಜೆಯನ್ನು ಜಾರಿಗೆ ತರಲಾಗುತ್ತದೆ.

ಅರ್ಹ ಶಿಕ್ಷಣ ಸಂಸ್ಥೆಗಳಲ್ಲಿ ಇನ್‌ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಅವುಗಳನ್ನು ಬಲಪಡಿಸಲು ಸರ್ಕಾರದಿಂದ ಒಂದು ಬಾರಿ ಆರ್ಥಿಕ ನೆರವು ನೀಡಲಾಗುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ಹಾಗೂ ಯುವ ಉದ್ಯಮಿಗಳಿಗೆ ಹೊಸ ಆಲೋಚನೆಗಳನ್ನು ಯಶಸ್ವಿ ಉದ್ಯಮಗಳಾಗಿ ರೂಪಿಸಲು ಅಗತ್ಯವಾದ ಮೂಲಸೌಕರ್ಯ ಮತ್ತು ಮಾರ್ಗದರ್ಶನ ಒದಗಿಸುವ ಉದ್ದೇಶ ಹೊಂದಲಾಗಿದೆ.

ಇದರ ಜೊತೆಗೆ, ಪ್ರತಿವರ್ಷ ‘ದೆಹಲಿ ಸ್ಟಾರ್ಟ್‌ಅಪ್ ಯೂತ್ ಫೆಸ್ಟಿವಲ್’ ಆಯೋಜಿಸಲಾಗುತ್ತದೆ. ಈ ವೇದಿಕೆಯಲ್ಲಿ ಯುವ ಆವಿಷ್ಕಾರಕರು, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಹೂಡಿಕೆದಾರರು, ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ನೀತಿ ರೂಪಿಸುವವರು ಒಂದೇ ವೇದಿಕೆಯಲ್ಲಿ ಸೇರಲಿದ್ದು, ಹೊಸ ಆಲೋಚನೆಗಳ ಪ್ರದರ್ಶನ, ಸಹಭಾಗಿತ್ವ ನಿರ್ಮಾಣ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡಲಾಗುತ್ತದೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಾತನಾಡಿ, ಈ ನೀತಿಯ ಮೂಲಕ ದೆಹಲಿಯನ್ನು ದೇಶದ ಪ್ರಮುಖ ಆವಿಷ್ಕಾರ ಮತ್ತು ಸ್ಟಾರ್ಟ್‌ಅಪ್ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಜೊತೆಗೆ, ಯುವಜನರು ತಮ್ಮ ಹೊಸ ಆಲೋಚನೆಗಳನ್ನು ಯಶಸ್ವಿ ಉದ್ಯಮಗಳಾಗಿ ಪರಿವರ್ತಿಸಿಕೊಳ್ಳಲು ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

Share This Article