ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ: ದಾಳಿ ಮತ್ತಷ್ಟು ತೀವ್ರಗೊಳಿಸುವ ಬೆದರಿಕೆ

1 Min Read
1 Min Read

ವಾಷಿಂಗ್ಟನ್: ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಈ ಬೆಳವಣಿಗೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ದೂರದರ್ಶನ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಹೋರ್ಮುಜ್ ಜಲಸಂಧಿ ಇತರ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ತೆರೆದಿದ್ದರೂ, ಇರಾನ್‌ಗೆ ಅದೇ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಇರಾನ್ ತನ್ನ ನಿಲುವು ಬದಲಿಸದಿದ್ದರೆ ಅಮೆರಿಕವು ಇಂದೇ ರಾತ್ರಿ ತೀವ್ರ ದಾಳಿ ನಡೆಸಲಿದ್ದು, ಮುಂದಿನ ದಿನಗಳಲ್ಲಿ ದಾಳಿಯ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಇರಾನ್ ಮಾತುಕತೆಗೆ ಮುಂದಾಗದಿದ್ದರೆ, ಅದರ ವಿದ್ಯುತ್ ಸ್ಥಾವರಗಳು ಹಾಗೂ ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

ಇದೇ ವೇಳೆ, ಇರಾನ್ ಅಣ್ವಸ್ತ್ರಗಳನ್ನು ಹೊಂದುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ ಟ್ರಂಪ್, ಟೆಹ್ರಾನ್ ಪ್ರತಿ ಬಾರಿ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ಟೀಕಿಸಿದರು. ಇರಾನ್ ನಾಯಕತ್ವದ ಮುಂದೆ ಈಗಿರುವ ಏಕೈಕ ಆಯ್ಕೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುವುದಷ್ಟೇ ಎಂದು ಅವರು ಹೇಳಿದರು.

ಇನ್ನೊಂದೆಡೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಹ್ರೇನ್‌ನಲ್ಲಿರುವ ಶೇಖ್ ಈಸಾ (Sheikh Isa) ಸೇನಾ ನೆಲೆಯಲ್ಲಿನ ಶಸ್ತ್ರಾಸ್ತ್ರ ಮತ್ತು ಬಿಡಿಭಾಗಗಳ ಸಂಗ್ರಹಾಗಾರಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ವ್ಯಾಪಕ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಅದೇ ರೀತಿ, ಕುವೈತ್‌ನ ಅಲಿ ಸಲೇಮ್ (Ali Salem) ವಾಯುನೆಲೆಯಲ್ಲಿ ನಿಯೋಜಿಸಲಾಗಿದ್ದ MQ-9 ಡ್ರೋನ್‌ಗಳ ತಾಣವನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಹಲವು ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಅಥವಾ ಹಾನಿಗೊಳಿಸಲಾಗಿದೆ ಎಂದು ಐಆರ್‌ಜಿಸಿ ಹೇಳಿಕೆ ನೀಡಿದೆ.

ಕುವೈತ್ ವಾಯು ರಕ್ಷಣಾ ಪಡೆಗಳು ಕೂಡ ದೇಶದ ವಾಯುಪ್ರದೇಶದಲ್ಲಿ ವೈರಿಯ ವೈಮಾನಿಕ ಗುರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವುದನ್ನು ದೃಢಪಡಿಸಿವೆ.

Share This Article