ಕೊಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯಕ್ಕೆ ಸಂಬಂಧಿಸಿದ ಏಕರೂಪ ನಾಗರಿಕ ಸಂಹಿತೆ (Uniform Civil Code – UCC) ಕರಡು ಮಸೂದೆಯನ್ನು ಪರಿಶೀಲಿಸಲು ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿದೆ.
ಈ ಸಂಬಂಧ ಸರ್ಕಾರ ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಸಮಿತಿಯ ಸದಸ್ಯರಾಗಿ ಮೇಘಾಲಯದ ಮಾಜಿ ರಾಜ್ಯಪಾಲ ತಥಾಗತ ರಾಯ್ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರಿಗೆ ಸ್ಥಾನ ನೀಡಲಾಗಿದೆ.
ಜುಲೈ 2ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡು ಮಸೂದೆಯನ್ನು ಸಮಗ್ರವಾಗಿ ಪರಿಶೀಲಿಸಲು ವಿಶೇಷ ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಇದೀಗ ಒಂಬತ್ತು ಸದಸ್ಯರ ಸಮಿತಿಯನ್ನು ಅಧಿಕೃತವಾಗಿ ರಚಿಸಿ ಅಧಿಸೂಚನೆ ಪ್ರಕಟಿಸಲಾಗಿದೆ.
ರಾಜ್ಯದ ಸಾಮಾಜಿಕ, ಕಾನೂನು ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಿಗಣಿಸಿ ಸಮಿತಿ ಕರಡು ಮಸೂದೆಯನ್ನು ಪರಿಶೀಲಿಸಿ ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ.


