ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅಮಿತ್ ಶಾ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಮುಖರ್ಜಿ ಅವರು ರಾಷ್ಟ್ರದ ಏಕತೆ, ಅಖಂಡತೆ ಹಾಗೂ ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರಾಗಿದ್ದರು ಎಂದು ಸ್ಮರಿಸಿದ್ದಾರೆ.
‘ರಾಷ್ಟ್ರವೇ ಮೊದಲ ಆದ್ಯತೆ‘ ಎಂಬ ತತ್ವವನ್ನು ತಮ್ಮ ಜೀವನದ ಮಾರ್ಗದರ್ಶಕವಾಗಿಸಿಕೊಂಡಿದ್ದ ಡಾ. ಮುಖರ್ಜಿ ಅವರ ದೂರದೃಷ್ಟಿಯ ನಾಯಕತ್ವ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಬಂಗಾಳ ವಿಭಜನೆಯ ಸಂದರ್ಭದಲ್ಲಿ ಅವರ ನಾಯಕತ್ವ ಹಾಗೂ ಜಮ್ಮು-ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಉಳಿಸಿಕೊಳ್ಳಲು ನಡೆಸಿದ ಹೋರಾಟ ಭಾರತೀಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ದೇಶದ ಏಕತೆ ಮತ್ತು ಅಖಂಡತೆಯ ಪರವಾಗಿ ಡಾ. ಮುಖರ್ಜಿ ಅವರು ತೋರಿದ ಅಚಲ ಬದ್ಧತೆ ಮತ್ತು ತತ್ವನಿಷ್ಠ ಹೋರಾಟ ಮುಂದಿನ ಪೀಳಿಗೆಯ ಯುವಕರಿಗೆ ಸದಾ ಸ್ಫೂರ್ತಿಯಾಗಲಿದೆ ಎಂದು ಗೃಹ ಸಚಿವರು ಅಭಿಪ್ರಾಯಪಟ್ಟಿದ್ದಾರೆ.


