ಜಾಗ್ರೆಬ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಕ್ರೊಯೇಷಿಯಾ ಗ್ರ್ಯಾಂಡ್ ಚೆಸ್ ಟೂರ್ ರಾಪಿಡ್ ವಿಭಾಗದ ಕೊನೆಯ ದಿನ ಅದ್ಭುತ ಪ್ರದರ್ಶನ ನೀಡಿ, ಫ್ರಾನ್ಸ್‌ನ ಅಲಿರೆಜಾ ಫಿರೋಜ್ಜಾ ಅವರೊಂದಿಗೆ ಸಂಯುಕ್ತ ಅಗ್ರಸ್ಥಾನ ಪಡೆದಿದ್ದಾರೆ.
ಕೊನೆಯ ದಿನ ನಡೆದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದ ಪ್ರಜ್ಞಾನಂದ, ಇವಾನ್ ಸಾರಿಕ್, ಬೊಗ್ದಾನ್-ಡ್ಯಾನಿಯೆಲ್ ಡೀಕ್ ಹಾಗೂ ಅನಿಶ್ ಗಿರಿ ಅವರನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.
ಇನ್ನೊಂದೆಡೆ, ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ನಿನ್ನೆ ನಡೆದ ಮೂರು ಪಂದ್ಯಗಳನ್ನೂ ಡ್ರಾ ಮಾಡಿಕೊಂಡರು. ಅವರು 10 ಅಂಕಗಳೊಂದಿಗೆ, ಸಂಯುಕ್ತ ಅಗ್ರಸ್ಥಾನದಲ್ಲಿರುವ ಆಟಗಾರರಿಗಿಂತ ಎರಡು ಅಂಕ ಹಿಂದೆ ಇದ್ದಾರೆ.
ಈಗ ಟೂರ್ನಿಯು 18 ಸುತ್ತುಗಳ ಬ್ಲಿಟ್ಜ್ ವಿಭಾಗಕ್ಕೆ ಕಾಲಿಟ್ಟಿದ್ದು, ಈ ವಿಭಾಗದ ಫಲಿತಾಂಶದ ಆಧಾರದ ಮೇಲೆ ಒಟ್ಟಾರೆ ಚಾಂಪಿಯನ್ ನಿರ್ಧಾರವಾಗಲಿದೆ.


