ಜೋಧ್‌ಪುರದಿಂದ ಸಾಣಂದ್‌ವರೆಗೆ ಪ್ರಧಾನಿ ಮೋದಿ ಪ್ರವಾಸ; ಮೆಟ್ರೋ, ರಿಫೈನರಿ, ಸೆಮಿಕಂಡಕ್ಟರ್ ಯೋಜನೆಗಳಿಗೆ ಚಾಲನೆ

2 Min Read
2 Min Read

ನಾಳೆ ರಾಜಸ್ಥಾನ-ಗುಜರಾತ್ ಪ್ರವಾಸಕ್ಕೆ ಪ್ರಧಾನಿ ಮೋದಿ; ₹1.06 ಲಕ್ಷ ಕೋಟಿ ಅಭಿವೃದ್ಧಿ ಯೋಜನೆಗಳ ಕೊಡುಗೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಜುಲೈ 4) ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ರಾಜಸ್ಥಾನ ಪ್ರವಾಸದ ವೇಳೆ ಪ್ರಧಾನಿ ಮೋದಿ ಜೋಧ್‌ಪುರ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸುಮಾರು ₹480 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟರ್ಮಿನಲ್ ವಾರ್ಷಿಕ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದೇ ಸಂದರ್ಭದಲ್ಲಿ ಪರಿಷ್ಕೃತ ಉಡಾನ್ (UDAN) ಯೋಜನೆಗೂ ಚಾಲನೆ ನೀಡಲಿದ್ದು, ಪ್ರಾದೇಶಿಕ ವಿಮಾನ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಬಳಿಕ ಬಲೋತ್ರಾದಲ್ಲಿ ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ಪೆಟ್ರೋಕೆಮಿಕಲ್ಸ್, ನಗರ ಸಾರಿಗೆ, ರೈಲ್ವೆ, ರಸ್ತೆ, ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ಪ್ರಸರಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಇದರಲ್ಲಿ ಸೇರಿವೆ.

ಬಲೋತ್ರಾದ ಪಚಪದ್ರಾದಲ್ಲಿ ನಿರ್ಮಾಣಗೊಂಡಿರುವ ಭಾರತದ ಮೊದಲ ಗ್ರೀನ್‌ಫೀಲ್ಡ್ ಏಕೀಕೃತ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ದೇಶದ ಇಂಧನ ಮತ್ತು ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.

ಇದೇ ವೇಳೆ ಜೈಪುರ ಮೆಟ್ರೋ ರೈಲು ಯೋಜನೆಯ ಎರಡನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು ₹13 ಸಾವಿರ ಕೋಟಿ ವೆಚ್ಚದ ಈ ಯೋಜನೆಯಡಿ 41 ಕಿಲೋಮೀಟರ್ ಉದ್ದದ ಉತ್ತರ-ದಕ್ಷಿಣ ಮೆಟ್ರೋ ಕಾರಿಡಾರ್ ಅಭಿವೃದ್ಧಿಯಾಗಲಿದ್ದು, ಪ್ರಹ್ಲಾದ್‌ಪುರದಿಂದ ಟೋಡಿ ಮೋಡ್‌ವರೆಗೆ 36 ನಿಲ್ದಾಣಗಳ ಮೂಲಕ ಕೈಗಾರಿಕಾ ಹಾಗೂ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ರಾಜಸ್ಥಾನ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡಿರುವ ಸುಮಾರು 54 ಸಾವಿರ ಯುವಕರಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ವಿತರಿಸಲಿದ್ದಾರೆ.

ಸಂಜೆ ಪ್ರಧಾನಿ ಮೋದಿ ಗುಜರಾತ್‌ನ ಸಾಣಂದ್ಗೆ ಭೇಟಿ ನೀಡಿ CG Semi Outsourced Semiconductor Assembly and Test ಘಟಕವನ್ನು ಉದ್ಘಾಟಿಸಲಿದ್ದಾರೆ. ವಾಣಿಜ್ಯ ಉತ್ಪಾದನೆ ಆರಂಭಿಸುತ್ತಿರುವ ಈ ಘಟಕವು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಅನುಮೋದನೆ ಪಡೆದ ಮೊದಲ ನಾಲ್ಕು ಯೋಜನೆಗಳಲ್ಲಿ ಇದೂ ಒಂದಾಗಿದ್ದು, ₹7,500 ಕೋಟಿಗೂ ಅಧಿಕ ಹೂಡಿಕೆಯಲ್ಲಿ ಈ ಘಟಕ ನಿರ್ಮಾಣಗೊಂಡಿದೆ.

Share This Article
Leave a Comment