ಬೆಲ್ಜಿಯಂ ಪ್ರವಾಸಕ್ಕೆ ಭಾರತ ಜೂನಿಯರ್ ಹಾಕಿ ತಂಡ ಪ್ರಕಟ; ಅನ್ಮೋಲ್ ಎಕ್ಕಾ ನಾಯಕ
ಬೆಲ್ಜಿಯಂನಲ್ಲಿ ಜುಲೈ 5ರಿಂದ 18ರವರೆಗೆ ನಡೆಯಲಿರುವ ಅಭ್ಯಾಸ ಪ್ರವಾಸಕ್ಕಾಗಿ 22 ಸದಸ್ಯರ ಭಾರತ ಅಂಡರ್-21 ಜೂನಿಯರ್ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ನೂತನ ಮುಖ್ಯ ಕೋಚ್ ಫ್ರೆಡರಿಕ್ ಸೋಯೆಜ್ ಅವರ ಮಾರ್ಗದರ್ಶನದಲ್ಲಿ ತಂಡದ ಇದು ಮೊದಲ ಪ್ರವಾಸವಾಗಿದ್ದು, ವರ್ಷದ ಅಂತ್ಯದಲ್ಲಿ ನಡೆಯಲಿರುವ ಎಫ್ಐಎಚ್ ಪುರುಷರ ಜೂನಿಯರ್ ಏಷ್ಯಾಕಪ್ ಟೂರ್ನಿಗೆ ಮಹತ್ವದ ಸಿದ್ಧತೆಯಾಗಿದೆ.
ಈ ಪ್ರವಾಸಕ್ಕೆ ರಕ್ಷಣಾ ಆಟಗಾರ ಅನ್ಮೋಲ್ ಎಕ್ಕಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಗೋಲ್ಕೀಪರ್ಗಳಾಗಿ ವಿವೇಕ್ ಲಾಕ್ರಾ ಮತ್ತು ಕುನಾಲ್ ತೆವಾಟಿಯಾ ಸ್ಥಾನ ಪಡೆದಿದ್ದಾರೆ.
ರಕ್ಷಣಾ ವಿಭಾಗದಲ್ಲಿ ನಾಯಕ ಅನ್ಮೋಲ್ ಎಕ್ಕಾ ಜೊತೆಗೆ ರೋಹಿತ್ ಕುಲ್ಲು, ಚಿರಾಗ್, ರವೀಂದರ್, ಪ್ರಶಾಂತ್ ಬಾರ್ಲಾ, ಸಂಜಿತ್ ತಿರ್ಕೆ ಹಾಗೂ ವಿ. ಮಣಿಮಾರನ್ ಸ್ಥಾನ ಪಡೆದಿದ್ದಾರೆ.
ಭಾರತ ತಂಡ ತನ್ನ ಅಭಿಯಾನವನ್ನು ಜುಲೈ 7 ಮತ್ತು 8ರಂದು ಆಸ್ಟ್ರಿಯಾ ವಿರುದ್ಧ ಆರಂಭಿಸಲಿದೆ. ಬಳಿಕ ಜುಲೈ 10ರಂದು ಆತಿಥೇಯ ಬೆಲ್ಜಿಯಂ, ಜುಲೈ 13ರಂದು ಜರ್ಮನಿ, ಜುಲೈ 14ರಂದು ಮತ್ತೊಮ್ಮೆ ಬೆಲ್ಜಿಯಂ ಹಾಗೂ ಜುಲೈ 17ರಂದು ನೆದರ್ಲೆಂಡ್ಸ್ ವಿರುದ್ಧ ಸೆಣಸುವ ಮೂಲಕ ಪ್ರವಾಸವನ್ನು ಮುಕ್ತಾಯಗೊಳಿಸಲಿದೆ.


