ಎರಡು ರಾಷ್ಟ್ರಗಳ ಪರಿಹಾರಕ್ಕೆ ಭಾರತದ ಬೆಂಬಲ; ಪ್ಯಾಲೆಸ್ಟೀನ್‌ಗೆ 175 ಮಿಲಿಯನ್ ಡಾಲರ್ ನೆರವು

1 Min Read
1 Min Read

ಪ್ಯಾಲೆಸ್ಟೀನ್‌ಗೆ 175 ಮಿಲಿಯನ್ ಡಾಲರ್‌ಗೂ ಅಧಿಕ ನೆರವು; ಎರಡು ರಾಷ್ಟ್ರಗಳ ಪರಿಹಾರಕ್ಕೆ ಭಾರತದ ಬೆಂಬಲ

ಪ್ಯಾಲೆಸ್ಟೀನ್ ಜನತೆಗೆ ಭಾರತ ಇದುವರೆಗೆ 175 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚು ನೆರವು ನೀಡಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪಿ. ಹರೀಶ್ (ಪರ್ವತನೇನಿ ಹರೀಶ್) ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ (UNRWA) ಆಯೋಜಿಸಿದ್ದ ನಿಧಿ ಸಂಗ್ರಹ ಸಮ್ಮೇಳನದಲ್ಲಿ ಭಾರತದ ಪರವಾಗಿ ಮಾತನಾಡಿದ ಅವರು, ಸುರಕ್ಷಿತ ಹಾಗೂ ಪರಸ್ಪರ ಮಾನ್ಯತೆ ಪಡೆದ ಗಡಿಗಳೊಂದಿಗೆ ಇಸ್ರೇಲ್ ಮತ್ತು ಸಾರ್ವಭೌಮ ಪ್ಯಾಲೆಸ್ಟೀನ್ ರಾಷ್ಟ್ರಗಳು ಶಾಂತಿ ಮತ್ತು ಭದ್ರತೆಯಿಂದ ಸಹಬಾಳ್ವೆ ನಡೆಸುವ ಎರಡು ರಾಷ್ಟ್ರಗಳ ಪರಿಹಾರಕ್ಕೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ ಎಂದು ಹೇಳಿದರು.

ಗಾಜಾದಲ್ಲಿನ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿದ್ದು, ಪ್ಯಾಲೆಸ್ಟೀನ್ ಜನರ ಮಾನವೀಯ ಅಗತ್ಯಗಳು ಮತ್ತು ಆಶಯಗಳನ್ನು ಈಡೇರಿಸುವತ್ತ ಭಾರತದ ಪ್ರಯತ್ನಗಳು ಮುಂದುವರಿದಿವೆ ಎಂದು ಅವರು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ ಮಾತ್ರ ಭಾರತ 150 ಟನ್‌ಗೂ ಅಧಿಕ ಮಾನವೀಯ ನೆರವು ಪ್ಯಾಲೆಸ್ಟೀನ್‌ಗೆ ಕಳುಹಿಸಿರುವುದನ್ನೂ ಅವರು ಉಲ್ಲೇಖಿಸಿದರು.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ವೇಳೆ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಜೊತೆಗೆ, ಸಮುದ್ರ ಮಾರ್ಗದ ಸಂಚಾರ ಹಾಗೂ ವಾಣಿಜ್ಯ ಸ್ವಾತಂತ್ರ್ಯವನ್ನು ರಕ್ಷಿಸಲು ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

Share This Article
Leave a Comment