ಸೀಶೆಲ್ಸ್‌ಗೆ ಪ್ರಧಾನಿ ಮೋದಿ ಮೂರು ದಿನಗಳ ಅಧಿಕೃತ ಭೇಟಿ; ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿ

1 Min Read
1 Min Read

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಮೂರು ದಿನಗಳ ಅಧಿಕೃತ ರಾಜ್ಯ ಪ್ರವಾಸಕ್ಕಾಗಿ ಸೀಶೆಲ್ಸ್ಗೆ ಪ್ರಯಾಣ ಬೆಳೆಸಲಿದ್ದಾರೆ. ಸೀಶೆಲ್ಸ್ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ 2015ರಲ್ಲಿ ಸೀಶೆಲ್ಸ್‌ಗೆ ಭೇಟಿ ನೀಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಈ ಬಾರಿ ನಡೆಯುವ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ತುಕಡಿ ಹಾಗೂ ಭಾರತೀಯ ನೌಕಾಪಡೆಯ ಎರಡು ಯುದ್ಧನೌಕೆಗಳು ಕೂಡ ಭಾಗವಹಿಸಲಿವೆ.

ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹೆರ್ಮಿನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ಸಹಕಾರ, ಪ್ರಾದೇಶಿಕ ಹಾಗೂ ಜಾಗತಿಕ ಮಹತ್ವದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ಇದೇ ವೇಳೆ ಸೀಶೆಲ್ಸ್ ರಾಷ್ಟ್ರೀಯ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ, ಅಲ್ಲಿನ ಭಾರತೀಯ ಸಮುದಾಯದ ಸದಸ್ಯರೊಂದಿಗೂ ಸಂವಾದ ನಡೆಸಲಿದ್ದಾರೆ. ಇಂದು ಅವರು ಬೊಟಾನಿಕಲ್ ಗಾರ್ಡನ್‌ನಲ್ಲಿ ನಡೆಯುವ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಸೀಶೆಲ್ಸ್ ಕರಾವಳಿ ರಕ್ಷಣಾ ಪಡೆ (Coast Guard) ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ.

ಭಾರತ ಮತ್ತು ಸೀಶೆಲ್ಸ್ ನಡುವಿನ ಸಂಬಂಧವು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಜನರಿಂದ ಜನರಿಗೆ ಇರುವ ಬಾಂಧವ್ಯದ ಮೇಲೆ ಆಧಾರಿತವಾಗಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಸಾಗರ ನೆರೆ ರಾಷ್ಟ್ರವಾಗಿರುವ ಸೀಶೆಲ್ಸ್, ಭಾರತದ ‘ಮಹಾಸಾಗರ (MAHASAGAR)’ ದೃಷ್ಟಿಕೋನ ಹಾಗೂ ಗ್ಲೋಬಲ್ ಸೌತ್ ಬದ್ಧತೆಯಲ್ಲಿ ವಿಶೇಷ ಸ್ಥಾನ ಹೊಂದಿದೆ. ಪ್ರಧಾನಿ ಮೋದಿಯವರ ಈ ಭೇಟಿ ಉಭಯ ರಾಷ್ಟ್ರಗಳ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಮೂಡಿಸಿದೆ.

Share This Article
Leave a Comment