ನವದೆಹಲಿ: ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಪ್ರಮುಖ ಚಾಲನಾ ಶಕ್ತಿಯಾಗಿ ಮುಂದುವರಿದಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಅಭಿಪ್ರಾಯಪಟ್ಟಿದೆ. ಇರಾನ್ ಸಂಘರ್ಷ ಹಾಗೂ ಜಾಗತಿಕ ಇಂಧನ ಬೆಲೆ ಏರಿಕೆಯಂತಹ ಬಾಹ್ಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ದೃಢವಾಗಿ ಸಾಗುತ್ತಿದೆ ಎಂದು ಐಎಂಎಫ್ ತಿಳಿಸಿದೆ.
ಐಎಂಎಫ್ ಸಂವಹನ ವಿಭಾಗದ ನಿರ್ದೇಶಕಿ ಜೂಲಿ ಕೊಝಾಕ್ ನಿಯಮಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಲಿಷ್ಠ ದೇಶೀಯ ಬೇಡಿಕೆಯು ಭಾರತದ ಆರ್ಥಿಕತೆಗೆ ಪ್ರಮುಖ ಆಧಾರವಾಗಿದ್ದು, ಬಾಹ್ಯ ಒತ್ತಡಗಳ ನಡುವೆಯೂ ಉತ್ತಮ ಸ್ಥಿರತೆ ಕಾಯ್ದುಕೊಂಡಿದೆ ಎಂದು ಹೇಳಿದರು.
2026-27ನೇ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು 6.5 ಶೇಕಡಾದಲ್ಲೇ ಐಎಂಎಫ್ ಮುಂದುವರಿಸಿದೆ. ಏಪ್ರಿಲ್‌ನಲ್ಲಿ ನೀಡಿದ್ದ ಮೇಲ್ಮುಖ ಪರಿಷ್ಕೃತ ಅಂದಾಜನ್ನು ಯಥಾವತ್ತಾಗಿ ಉಳಿಸಿಕೊಂಡಿರುವ ಐಎಂಎಫ್, ಕಳೆದ ವರ್ಷದ ಆರ್ಥಿಕ ವೇಗ ಹಾಗೂ ಅಮೆರಿಕದ ಸುಂಕ ದರಗಳ ಇಳಿಕೆಯಿಂದ ಜಾಗತಿಕ ಇಂಧನ ಆಘಾತದ ಪರಿಣಾಮ ತಗ್ಗಿದೆ ಎಂದು ತಿಳಿಸಿದೆ.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಭಾರತದ ಆರ್ಥಿಕತೆ ನಿರೀಕ್ಷೆಗಿಂತ ಉತ್ತಮ ಸಾಧನೆ ಮಾಡಿದೆ ಎಂದು ಐಎಂಎಫ್ ಹೇಳಿದೆ.
ಇದೇ ವೇಳೆ, ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಜಾರಿಯಾದ ಕದನ ವಿರಾಮ ಮತ್ತು ಹೋರ್ಮುಜ್ ಜಲಸಂಧಿ ಪುನರಾರಂಭದತ್ತ ಆಗಿರುವ ಪ್ರಗತಿ ಜಾಗತಿಕ ಆರ್ಥಿಕತೆಗೆ ಸಕಾರಾತ್ಮಕ ಬೆಳವಣಿಗೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. ತೈಲದ ಬೆಲೆಗಳು ಗರಿಷ್ಠ ಮಟ್ಟದಿಂದ ಇಳಿದಿದ್ದರೂ, ಸಂಘರ್ಷಕ್ಕೂ ಮುಂಚಿನ ಮಟ್ಟಕ್ಕಿಂತ ಇನ್ನೂ ಸುಮಾರು 10 ಶೇಕಡಾ ಹೆಚ್ಚಿವೆ ಎಂದು ತಿಳಿಸಿದೆ.
ಐಎಂಎಫ್ ತನ್ನ ನವೀಕೃತ ಜಾಗತಿಕ ಆರ್ಥಿಕ ಬೆಳವಣಿಗೆ ಮುನ್ಸೂಚಿಕೆಯನ್ನು ಜುಲೈ 8ರಂದು ಪ್ರಕಟಿಸುವ ನಿರೀಕ್ಷೆಯಿದೆ.


