ನವದೆಹಲಿ: ಲೋನಿ ಅರ್ಬನ್ ಮಲ್ಟಿ ಸ್ಟೇಟ್ ಕ್ರೆಡಿಟ್ ಅಂಡ್ ಥ್ರಿಫ್ಟ್ ಕೋ-ಆಪರೇಟಿವ್ ಸೊಸೈಟಿ ಚಿಟ್‌ಫಂಡ್ ವಂಚನೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಮಹತ್ವದ ಕ್ರಮ ಕೈಗೊಂಡಿದೆ. ಪ್ರಕರಣದ ಆರೋಪಿಗಳಿಗೆ ಸೇರಿದ 23 ಆಸ್ತಿಗಳನ್ನು ಜಪ್ತಿ ಮಾಡುವಲ್ಲಿ ಸಿಬಿಐ ಯಶಸ್ವಿಯಾಗಿದೆ.
ಸಿಬಿಐ ನೀಡಿರುವ ಮಾಹಿತಿಯ ಪ್ರಕಾರ, ಜಪ್ತಿಗೊಂಡಿರುವ ಆಸ್ತಿಗಳು ಉತ್ತರಾಖಂಡ, ಉತ್ತರ ಪ್ರದೇಶ ಹಾಗೂ ಮುಂಬೈನಲ್ಲಿ ಇವೆ. ತನಿಖೆ ವೇಳೆ ಚಿಟ್‌ಫಂಡ್ ವಂಚನೆಯ ಹಣದಿಂದ ಆರೋಪಿಗಳು ಹಲವು ಆಸ್ತಿಗಳನ್ನು ಖರೀದಿಸಿರುವುದು ಪತ್ತೆಯಾಗಿದ್ದು, ಇದುವರೆಗೆ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC), ಭಾರತೀಯ ನ್ಯಾಯ ಸಂಹಿತೆ (BNS), ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ ಹಾಗೂ ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ.
ಸಿಬಿಐ ತನಿಖೆಯ ಪ್ರಕಾರ, ಆರೋಪಿಗಳು 1.6 ಲಕ್ಷಕ್ಕೂ ಅಧಿಕ ಠೇವಣಿದಾರರನ್ನು ವಂಚಿಸಿ, ₹400 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ


