ನವದೆಹಲಿದಲ್ಲಿ ಬ್ರಿಕ್ಸ್ ಭದ್ರತಾ ಸಲಹೆಗಾರರ ಸಭೆ ಆರಂಭ; ಸೈಬರ್ ಬೆದರಿಕೆಗಳ ಮೇಲೆ ವಿಶೇಷ ಚರ್ಚೆ

1 Min Read
1 Min Read

ನವದೆಹಲಿ: ಬ್ರಿಕ್ಸ್ (BRICS) ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಹತ್ವದ ಎರಡು ದಿನಗಳ ಸಭೆ ಇಂದು ನವದೆಹಲಿಯಲ್ಲಿ ಆರಂಭವಾಗಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಬ್ರಿಕ್ಸ್ ಒಕ್ಕೂಟದ 11 ಸದಸ್ಯ ರಾಷ್ಟ್ರಗಳ ಭದ್ರತಾ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಭಾರತ, ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೇರಿದಂತೆ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

‘ಇಂದಿನ ಜಗತ್ತನ್ನು ಎದುರಿಸುತ್ತಿರುವ ಸಾಂಪ್ರದಾಯಿಕವಲ್ಲದ ಭದ್ರತಾ ಸವಾಲುಗಳು’ ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಸಭೆ ನಡೆಯುತ್ತಿದ್ದು, ವೇಗವಾಗಿ ಬದಲಾಗುತ್ತಿರುವ ಜಾಗತಿಕ ಭದ್ರತಾ ಪರಿಸ್ಥಿತಿ, ಹೊಸ ತಂತ್ರಜ್ಞಾನಗಳಿಂದ ಉಂಟಾಗುತ್ತಿರುವ ಅಪಾಯಗಳು ಹಾಗೂ ರಾಷ್ಟ್ರಗಳ ಭದ್ರತೆ ಮೇಲೆ ಅವುಗಳ ಪರಿಣಾಮಗಳ ಕುರಿತು ಚರ್ಚೆ ನಡೆಯಲಿದೆ.

ವಿಶೇಷವಾಗಿ ಸೈಬರ್ ಭದ್ರತೆ, ಡಿಜಿಟಲ್ ಮೂಲಸೌಕರ್ಯಗಳ ದುರ್ಬಲತೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪಾಯಗಳು ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಸುರಕ್ಷಿತ ಬಳಕೆ ಕುರಿತ ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ. ಇತ್ತೀಚೆಗೆ ನಡೆದ ಬ್ರಿಕ್ಸ್ ಭಯೋತ್ಪಾದನೆ ವಿರೋಧಿ ಮತ್ತು ಮಾಹಿತಿ ತಂತ್ರಜ್ಞಾನ ಭದ್ರತಾ ಕಾರ್ಯಪಡೆಗಳ ಶಿಫಾರಸುಗಳನ್ನೂ ಪರಿಶೀಲಿಸಲಾಗುತ್ತಿದೆ.

2026ರಲ್ಲಿ ಭಾರತ ನಾಲ್ಕನೇ ಬಾರಿಗೆ ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಈ ಹಿಂದೆ 2012, 2016 ಮತ್ತು 2021ರಲ್ಲಿ ನಾಯಕತ್ವ ವಹಿಸಿತ್ತು. ‘ಸ್ಥೈರ್ಯ, ನವೀನತೆ, ಸಹಕಾರ ಮತ್ತು ಸುಸ್ಥಿರತೆ ನಿರ್ಮಾಣ’ ಎಂಬ ಧ್ಯೇಯವಾಕ್ಯದಡಿ ಭಾರತದ ಅಧ್ಯಕ್ಷತೆ ಸಾಗುತ್ತಿದ್ದು, ಜಾಗತಿಕ ಸಹಕಾರ ಮತ್ತು ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ.

ಆರಂಭದಲ್ಲಿ ಆರ್ಥಿಕ ಸಹಕಾರಕ್ಕೆ ಸೀಮಿತವಾಗಿದ್ದ ಬ್ರಿಕ್ಸ್ ಒಕ್ಕೂಟವು ಇದೀಗ ರಾಜಕೀಯ ಮತ್ತು ಭದ್ರತಾ ಸಹಕಾರ, ಆರ್ಥಿಕ ಮತ್ತು ಹಣಕಾಸು ಪಾಲುದಾರಿಕೆ ಹಾಗೂ ಜನರ ನಡುವಿನ ಸಂಪರ್ಕ ವೃದ್ಧಿ ಎಂಬ ಮೂರು ಪ್ರಮುಖ ಕ್ಷೇತ್ರಗಳಿಗೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ.

Share This Article
Leave a Comment