ಬೆಂಗಳೂರುದಲ್ಲಿ ಏರ್ ಫೋರ್ಸ್ ಅರ್ಜನ್ ಸಿಂಗ್ ಸ್ಮಾರಕ ಹಾಕಿ ಟೂರ್ನಿಗೆ ಚಾಲನೆ; ದೇಶದ 16 ತಂಡಗಳ ಸೆಣಸಾಟ

1 Min Read
1 Min Read

ಬೆಂಗಳೂರು: ಭಾರತೀಯ ವಾಯುಪಡೆಯ ದಿಗ್ಗಜ ಹಾಗೂ ಮಾಜಿ ವಾಯುಪಡೆ ಮುಖ್ಯಸ್ಥ ಮಾರ್ಷಲ್ ಅರ್ಜನ್ ಸಿಂಗ್ ಅವರ ಸ್ಮರಣಾರ್ಥ ಆಯೋಜಿಸಲಾಗುತ್ತಿರುವ 7ನೇ ಆವೃತ್ತಿಯ ‘ಏರ್ ಫೋರ್ಸ್ ಅರ್ಜನ್ ಸಿಂಗ್ ಮೆಮೋರಿಯಲ್ ಹಾಕಿ ಟೂರ್ನಮೆಂಟ್–2026’ಕ್ಕೆ ನಾಳೆಯಿಂದ ಬೆಂಗಳೂರಿನಲ್ಲಿ ಚಾಲನೆ ದೊರೆಯಲಿದೆ.

ಜಲಹಳ್ಳಿಯ ವಾಯುಪಡೆ ಕೇಂದ್ರದಲ್ಲಿರುವ ಏರ್ ಮಾರ್ಷಲ್ ಅಮಿತ್ ಸಿಂಗ್ ಬಕ್ಷಿ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯು ಮುಂದಿನ ತಿಂಗಳ 3ರವರೆಗೆ ನಡೆಯಲಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಏರ್ ಮಾರ್ಷಲ್ ಎಸ್. ಶಿವಕುಮಾರ್, ದೇಶದ ವಿವಿಧ ಭಾಗಗಳಿಂದ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು. ಭಾರತೀಯ ಸೇನೆ, ರೈಲ್ವೆ, ಸಿಐಎಸ್‌ಎಫ್, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಹಾಗೂ ಸಂಸ್ಥೆಗಳ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಈ ಬಾರಿ ಟೂರ್ನಿಯನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಹಾಕಿ ಕ್ರೀಡೆಯನ್ನು ಉತ್ತೇಜಿಸುವ ಹಾಗೂ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಮುಂದುವರಿದಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವರ್ಷದ ಟೂರ್ನಿಯಲ್ಲಿ ಯಾವುದೇ ವಿದೇಶಿ ತಂಡಗಳು ಭಾಗವಹಿಸುತ್ತಿಲ್ಲ ಎಂದು ಏರ್ ಮಾರ್ಷಲ್ ಶಿವಕುಮಾರ್ ಸ್ಪಷ್ಟಪಡಿಸಿದರು.

ಬಹುಮಾನ ಮೊತ್ತದಲ್ಲಿ ಭಾರಿ ಏರಿಕೆ

ಈ ಬಾರಿಯ ಟೂರ್ನಿಯಲ್ಲಿ ಬಹುಮಾನ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕಳೆದ ಬಾರಿ ₹7.51 ಲಕ್ಷ ಇದ್ದ ಒಟ್ಟು ಬಹುಮಾನ ಮೊತ್ತವನ್ನು ₹26.25 ಲಕ್ಷಕ್ಕೆ ಏರಿಸಲಾಗಿದೆ.

ವಿಜೇತ ತಂಡಕ್ಕೆ ₹10 ಲಕ್ಷ ನಗದು ಬಹುಮಾನ ನೀಡಲಾಗಲಿದ್ದು, ರನ್ನರ್-ಅಪ್ ತಂಡ ₹8 ಲಕ್ಷ ಬಹುಮಾನ ಪಡೆಯಲಿದೆ. ಉಳಿದ ಬಹುಮಾನಗಳನ್ನು ವೈಯಕ್ತಿಕ ಸಾಧನೆ ಹಾಗೂ ಇತರೆ ವಿಭಾಗಗಳಿಗೆ ವಿತರಿಸಲಾಗುತ್ತದೆ.

ದೇಶದ ಪ್ರಮುಖ ಹಾಕಿ ತಂಡಗಳು ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ತೀವ್ರ ಪೈಪೋಟಿ ಹಾಗೂ ರೋಚಕ ಪಂದ್ಯಗಳು ನಡೆಯುವ ನಿರೀಕ್ಷೆ ಮೂಡಿದೆ. ಕ್ರೀಡಾಭಿಮಾನಿಗಳಿಗೆ ಉನ್ನತ ಮಟ್ಟದ ಹಾಕಿ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಈ ಟೂರ್ನಿ ಮೂಲಕ ಲಭಿಸಲಿದೆ.

Share This Article