ಪಿಎಂ-ಕಿಸಾನ್, ಬೆಳೆ ವಿಮೆ, ಡಿಜಿಟಲ್ ಕೃಷಿಗೆ ಚಾಲನೆ: ರೈತರಿಗಾಗಿ ಭರ್ಜರಿ ಘೋಷಣೆ

2 Min Read
2 Min Read

ಕೋಲ್ಕತ್ತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 23ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ದೇಶದಾದ್ಯಂತ 9.44 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹18,880 ಕೋಟಿಗೂ ಅಧಿಕ ಮೊತ್ತ ಜಮೆಯಾಗಲಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾಹಿತಿಯ ಪ್ರಕಾರ, ಈ ಕಂತಿನ ನೆರವಿನಿಂದ 2.18 ಕೋಟಿಗೂ ಹೆಚ್ಚು ಮಹಿಳಾ ರೈತೆಯರು ಸಹ ಪ್ರಯೋಜನ ಪಡೆಯಲಿದ್ದಾರೆ. 2019ರ ಫೆಬ್ರವರಿಯಲ್ಲಿ ಯೋಜನೆ ಆರಂಭವಾದ ಬಳಿಕ ಇದುವರೆಗೆ ವಿತರಿಸಲಾದ ಒಟ್ಟು ಮೊತ್ತ ₹4.46 ಲಕ್ಷ ಕೋಟಿ ಮೀರಲಿದೆ.

ಪಶ್ಚಿಮ ಬಂಗಾಳದಲ್ಲಿಯೇ 45.35 ಲಕ್ಷಕ್ಕೂ ಹೆಚ್ಚು ರೈತರಿಗೆ ₹907 ಕೋಟಿಗೂ ಅಧಿಕ ಮೊತ್ತ ಲಭ್ಯವಾಗಲಿದೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳ ಮೂಲಕ 2026-27ನೇ ಸಾಲಿನಲ್ಲಿ ರಾಜ್ಯದ 1.10 ಕೋಟಿಗೂ ಹೆಚ್ಚು ರೈತರಿಗೆ ವಿಮಾ ರಕ್ಷಣೆ ಒದಗಿಸುವ ಗುರಿ ಹೊಂದಲಾಗಿದೆ.

ಇದರ ಜೊತೆಗೆ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ಅಗ್ರಿ ಸ್ಟ್ಯಾಕ್ (AgriStack) ವೇದಿಕೆಯನ್ನು ಆರಂಭಿಸಲಿದ್ದು, ಇದರ ಮೂಲಕ ಬೆಳೆ ವಿಮೆ, ಸಾಲ ಸೌಲಭ್ಯ, ರಸಗೊಬ್ಬರ ವಿತರಣೆ ಹಾಗೂ ನೇರ ಲಾಭ ವರ್ಗಾವಣೆ ಸೇರಿದಂತೆ ವಿವಿಧ ಸೇವೆಗಳು ರೈತರಿಗೆ ಒಂದೇ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗಲಿವೆ.

ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 346 ನೈಸರ್ಗಿಕ ಕೃಷಿ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, 17,300 ಹೆಕ್ಟೇರ್ ಪ್ರದೇಶದ 43 ಸಾವಿರಕ್ಕೂ ಹೆಚ್ಚು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ.

ಇದಲ್ಲದೆ, ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯನ್ನು ಪುರೂಲಿಯಾ, ದಾರ್ಜಿಲಿಂಗ್, ಅಲಿಪುರ್ದುವಾರ್ ಮತ್ತು ಜಾರ್ಗ್ರಾಮ್ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತಿದ್ದು, ಕೃಷಿ ಉತ್ಪಾದಕತೆ ಹೆಚ್ಚಿಸುವುದು, ನೀರಾವರಿ ಹಾಗೂ ಕೊಯ್ಲಿನ ನಂತರದ ಮೂಲಸೌಕರ್ಯ ಬಲಪಡಿಸುವುದು ಮತ್ತು ರೈತರಿಗೆ ಸಂಸ್ಥಾಗತ ಸಾಲ ಸೌಲಭ್ಯಗಳನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ.

ದೇಶಾದ್ಯಂತ ‘ಪಿಎಂ-ಕಿಸಾನ್ ಉತ್ಸವ ದಿವಸ್’ ಆಚರಿಸಲಾಗುತ್ತಿದ್ದು, ಒಂದು ಕೋಟಿಗೂ ಹೆಚ್ಚು ರೈತರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Share This Article
Leave a Comment