ಭಾರತದಲ್ಲಿ ಡಿಜಿಟಲ್ ಕ್ರಾಂತಿಯು ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ. ದೇಶದ ಬ್ರಾಡ್‌ಬ್ಯಾಂಡ್ ಗ್ರಾಹಕರ ಸಂಖ್ಯೆ 2025ರ ನವೆಂಬರ್ ತಿಂಗಳಲ್ಲಿ 100 ಕೋಟಿ ಗಡಿಯನ್ನು ದಾಟಿದೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ತಿಳಿಸಿದೆ.
Ministry of Communications ಬಿಡುಗಡೆ ಮಾಡಿದ ಪ್ರಕಟಣೆಯಂತೆ, ಕಳೆದ ದಶಕದಲ್ಲಿ ದೇಶದ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆ ಆರು ಪಟ್ಟು ಹೆಚ್ಚಳ ಕಂಡಿದೆ. 2015ರ ನವೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಕೇವಲ 13.15 ಕೋಟಿ ಬ್ರಾಡ್‌ಬ್ಯಾಂಡ್ ಗ್ರಾಹಕರು ಮಾತ್ರ ಇದ್ದರು. ಆದರೆ 2025ರ ನವೆಂಬರ್ ಅಂತ್ಯಕ್ಕೆ ಈ ಸಂಖ್ಯೆ 100.37 ಕೋಟಿಗೆ ಏರಿಕೆಯಾಗಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದ ವಿಸ್ತರಣೆ, ಕಡಿಮೆ ದರದ ಡೇಟಾ ಯೋಜನೆಗಳು, 4G ಮತ್ತು 5G ಸೇವೆಗಳ ವೇಗದ ವಿಸ್ತಾರ, ಜೊತೆಗೆ ಡಿಜಿಟಲ್ ಸೇವೆಗಳ ಮೇಲಿನ ಅವಲಂಬನೆಯು ಈ ಭಾರೀ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಡಿಜಿಟಲ್ ಇಂಡಿಯಾ ಯೋಜನೆಯ ಪರಿಣಾಮವಾಗಿ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಇ-ಆಡಳಿತ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಇಂಟರ್ನೆಟ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆಯಲ್ಲಿ ಈ ಇತಿಹಾಸಾತ್ಮಕ ಸಾಧನೆ ದೇಶವನ್ನು ಡಿಜಿಟಲ್ ಶಕ್ತಿಯಾಗಿ ಮತ್ತಷ್ಟು ಬಲಪಡಿಸಿದೆ ಎಂದು ಸರ್ಕಾರ ತಿಳಿಸಿದೆ.


