ಡಾ. ಶ್ಯಾಮ ಪ್ರಸಾದ್ ಮುಖರ್ಜಿ 125ನೇ ಜನ್ಮಜಯಂತಿ: ಪ್ರಧಾನಿ ಮೋದಿ ಭಾವಪೂರ್ಣ ನಮನ

1 Min Read
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ್ದು, ಅವರನ್ನು ಧೈರ್ಯ, ರಾಷ್ಟ್ರಭಕ್ತಿ ಹಾಗೂ ನಿಸ್ವಾರ್ಥ ಸೇವೆಯ ಶಾಶ್ವತ ಪ್ರತೀಕ ಎಂದು ಬಣ್ಣಿಸಿದ್ದಾರೆ.

ಈ ಕುರಿತು ಲೇಖನ ಪ್ರಕಟಿಸಿರುವ ಪ್ರಧಾನಿ ಮೋದಿ, ಡಾ. ಮುಖರ್ಜಿ ಅವರ ಸಾರ್ವಜನಿಕ ಜೀವನವು ಭಾರತದ ಅಖಂಡತೆ ಮತ್ತು ಏಕತೆಯ ಮೇಲಿನ ಅಚಲ ಬದ್ಧತೆಯಿಂದಲೇ ಗುರುತಿಸಿಕೊಂಡಿದೆ ಎಂದು ಹೇಳಿದ್ದಾರೆ.

ದೇಶ ವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಭಾರತದಲ್ಲೇ ಉಳಿಯುವಂತೆ ಮಹತ್ವದ ಪಾತ್ರ ವಹಿಸಿದ್ದ ಡಾ. ಮುಖರ್ಜಿ, ಬಳಿಕ ಜಮ್ಮು-ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಉಳಿಸಿಕೊಳ್ಳುವ ಹೋರಾಟಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.

2019ರಲ್ಲಿ ಸಂವಿಧಾನದ 370 ಹಾಗೂ 35(ಎ) ವಿಧಿಗಳನ್ನು ರದ್ದುಪಡಿಸಿರುವುದು ಡಾ. ಮುಖರ್ಜಿ ಅವರ ತ್ಯಾಗಕ್ಕೆ ಸಲ್ಲಿಸಿದ ಅತ್ಯುತ್ತಮ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಡಾ. ಮುಖರ್ಜಿ ಅವರ ಶೈಕ್ಷಣಿಕ ಸಾಧನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ವಯಸ್ಸಿನ ಕುಲಪತಿಯಾಗಿ ಸೇವೆ ಸಲ್ಲಿಸಿ ಶಿಕ್ಷಣ, ಸಂಶೋಧನೆ ಹಾಗೂ ವಿದ್ಯಾರ್ಥಿ ಕಲ್ಯಾಣ ಕ್ಷೇತ್ರದಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದ್ದರು ಎಂದು ಹೇಳಿದ್ದಾರೆ.

ಸ್ವತಂತ್ರ ಭಾರತದ ಮೊದಲ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ, ದಾಮೋದರ್ ವ್ಯಾಲಿ ಕಾರ್ಪೊರೇಷನ್, ಸಿಂದ್ರಿ ರಸಗೊಬ್ಬರ ಘಟಕ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿ ಆಧುನಿಕ ಕೈಗಾರಿಕಾ ಭಾರತದ ಅಡಿಪಾಯ ಹಾಕಿದವರೂ ಅವರೇ ಎಂದು ಪ್ರಧಾನಿ ವಿವರಿಸಿದ್ದಾರೆ.

ಇದರ ಜೊತೆಗೆ, 1943ರ ಬಂಗಾಳ ಬರಗಾಲದ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳು ಹಾಗೂ ಉಚಿತ ಅನ್ನಸತ್ರಗಳನ್ನು ಸ್ಥಾಪಿಸಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಾದ ಅವರ ಮಾನವೀಯ ಸೇವೆಯನ್ನು ಕೂಡ ಪ್ರಧಾನಿ ಮೋದಿ ಸ್ಮರಿಸಿದ್ದಾರೆ.

Share This Article