ಉಪಗ್ರಹ ತಂತ್ರಜ್ಞಾನದಿಂದ ಹೆಲಿಕಾಪ್ಟರ್ ಲ್ಯಾಂಡಿಂಗ್: ದೇಶದ ಮೊದಲ PinS ವ್ಯವಸ್ಥೆಗೆ ಕೇಂದ್ರದ ಅನುಮೋದನೆ

1 Min Read
1 Min Read

ಹೆಲಿಕಾಪ್ಟರ್ ಹಾರಾಟದಲ್ಲಿ ಭಾರತದ ಐತಿಹಾಸಿಕ ಸಾಧನೆ; ಮೊದಲ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಗೆ ಅನುಮೋದನೆ

ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ದೇಶದ ಮೊದಲ ಪ್ರೈವೇಟ್ ಪಾಯಿಂಟ್-ಇನ್-ಸ್ಪೇಸ್ (PinS) ಉಪಗ್ರಹ ಆಧಾರಿತ ಇನ್‌ಸ್ಟ್ರುಮೆಂಟ್ ಅಪ್ರೋಚ್ (Instrument Approach) ಲ್ಯಾಂಡಿಂಗ್ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ. ಈ ವ್ಯವಸ್ಥೆಯನ್ನು ಉಂಡವಳ್ಳಿ ಹೆಲಿಪೋರ್ಟ್ನಲ್ಲಿ ಜಾರಿಗೆ ತರಲಾಗಿದೆ.

PinS ತಂತ್ರಜ್ಞಾನವು ಅತ್ಯಾಧುನಿಕ ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸಿಕೊಂಡು, ಸಾಂಪ್ರದಾಯಿಕ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸೌಲಭ್ಯಗಳಿಲ್ಲದ ಹೆಲಿಪೋರ್ಟ್‌ಗಳಲ್ಲಿಯೂ ಹೆಲಿಕಾಪ್ಟರ್‌ಗಳು ಸುರಕ್ಷಿತ ಹಾಗೂ ನಿಖರವಾಗಿ ಇಳಿಯಲು ನೆರವಾಗುತ್ತದೆ.

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಹಾಗೂ ನೆಲ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಗಳಿಲ್ಲದ ಪ್ರದೇಶಗಳಲ್ಲಿ ಈ ತಂತ್ರಜ್ಞಾನ ಅತ್ಯಂತ ಪರಿಣಾಮಕಾರಿಯಾಗಲಿದೆ. ಈ ವ್ಯವಸ್ಥೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಅಭಿವೃದ್ಧಿಪಡಿಸಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಅನುಮೋದನೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಈ ಸಾಧನೆಯು ದೇಶದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಹೊಸ ಯುಗದ ಆರಂಭವಾಗಿದ್ದು, ಹಾರಾಟದ ಸುರಕ್ಷತೆ, ಕಾರ್ಯಾಚರಣೆಯ ದಕ್ಷತೆ ಹಾಗೂ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ ಸೇವೆ ಒದಗಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಇದೇ ರೀತಿಯ PinS ವ್ಯವಸ್ಥೆಯನ್ನು ದೇಶದ ಇತರೆ ಭಾಗಗಳಲ್ಲೂ ಜಾರಿಗೆ ತರುವ ಯೋಜನೆ ಇದ್ದು, ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ, ಸಮುದ್ರ ತೀರದ ಕಾರ್ಯಾಚರಣೆ, ಯಾತ್ರಾ ಸೇವೆಗಳು, ಕಾರ್ಪೊರೇಟ್ ವಿಮಾನಯಾನ ಹಾಗೂ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಗೆ ಇದು ಮಹತ್ತರ ಉತ್ತೇಜನ ನೀಡಲಿದೆ ಎಂದು ಸಚಿವಾಲಯ ತಿಳಿಸಿದೆ.

Share This Article
Leave a Comment