10 ವರ್ಷ ಪೂರೈಸಿದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ; 2.7 ಕೋಟಿ ರೈತರಿಗೆ ಲಾಭ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಯಶಸ್ವಿಯಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದ್ದು, ನೀರಾವರಿ ವಿಸ್ತರಣೆ ಹಾಗೂ ಸುಸ್ಥಿರ ಜಲ ನಿರ್ವಹಣೆಯ ಮೂಲಕ ದೇಶದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಗೆ ಕಾರಣವಾಗಿದೆ.
2015ರ ಜುಲೈ 1ರಂದು ಆರಂಭವಾದ ಈ ಯೋಜನೆಯ ಪ್ರಮುಖ ಉದ್ದೇಶ, ದೇಶದ ರೈತರಿಗೆ ಖಚಿತ ನೀರಾವರಿ ಸೌಲಭ್ಯ ಒದಗಿಸುವುದು, ಕೃಷಿ ಭೂಮಿಯಲ್ಲಿ ನೀರಿನ ಸಮರ್ಪಕ ಬಳಕೆಯನ್ನು ಉತ್ತೇಜಿಸುವುದು ಹಾಗೂ ಜಲ ಸಂರಕ್ಷಣೆಯನ್ನು ಬಲಪಡಿಸುವುದಾಗಿದೆ.
ಕಳೆದ ಒಂದು ದಶಕದಲ್ಲಿ ಮಳೆನೀರು ಸಂಗ್ರಹ (ಜಲ ಸಂಚಯ) ಹಾಗೂ ಸಮರ್ಥ ನೀರಾವರಿ ವ್ಯವಸ್ಥೆ (ಜಲ ಸಿಂಚನ) ಮೂಲಕ ಕೃಷಿ ಕ್ಷೇತ್ರದಲ್ಲಿ ನೀರಿನ ಪರಿಣಾಮಕಾರಿ ಬಳಕೆಗೆ ಯೋಜನೆ ಮಹತ್ವದ ಕೊಡುಗೆ ನೀಡಿದೆ.
2016-17ರಿಂದ ಇಲ್ಲಿವರೆಗೆ 2.7 ಕೋಟಿಗೂ ಹೆಚ್ಚು ರೈತರು ಈ ಯೋಜನೆಯ ಪ್ರಯೋಜನ ಪಡೆದಿದ್ದು, ದೇಶದಾದ್ಯಂತ 2.46 ಕೋಟಿ ಹೆಕ್ಟೇರ್ಗಿಂತ ಹೆಚ್ಚು ಪ್ರದೇಶದಲ್ಲಿ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಲು ಅಥವಾ ಪುನರುಜ್ಜೀವನಗೊಳಿಸಲು ಯೋಜನೆ ನೆರವಾಗಿದೆ.
ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ, ಬೆಳೆ ಉತ್ಪಾದಕತೆ ಹೆಚ್ಚಿಸುವುದು ಹಾಗೂ ಪರಿಸರ ಸ್ನೇಹಿ ಜಲ ನಿರ್ವಹಣೆಯನ್ನು ಉತ್ತೇಜಿಸುವಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ.


