ಪೆಟ್ರೋಲ್-ಡೀಸೆಲ್ ವಿತರಣೆಯ ಮೇಲಿನ ತಾತ್ಕಾಲಿಕ ನಿರ್ಬಂಧ ತೆರವು; ಜುಲೈ 1ರಿಂದ ಹಳೆಯ ವ್ಯವಸ್ಥೆ ಜಾರಿ

1 Min Read
1 Min Read

ಪೆಟ್ರೋಲ್-ಡೀಸೆಲ್ ವಿತರಣೆಯ ಮೇಲಿನ ತಾತ್ಕಾಲಿಕ ನಿರ್ಬಂಧ ತೆರವು; ಜುಲೈ 1ರಿಂದ ಹಳೆಯ ವ್ಯವಸ್ಥೆ ಜಾರಿ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಹಾಗೂ ವಿತರಣೆಗೆ ವಿಧಿಸಲಾಗಿದ್ದ ತಾತ್ಕಾಲಿಕ ನಿಯಂತ್ರಣ ಕ್ರಮಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಟಣೆಯಂತೆ, ಜುಲೈ 1, 2026ರಿಂದ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ (OMCs) ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಈ ನಿಯಮಗಳು ಅನ್ವಯಿಸುವುದಿಲ್ಲ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರಗಳು ಏರಿಕೆಯಾಗಿದ್ದರೂ, ದೇಶೀಯ ಚಿಲ್ಲರೆ ಗ್ರಾಹಕರ ಹಿತದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಸರ್ಕಾರ ಸ್ಥಿರವಾಗಿರಿಸಿತ್ತು. ಇದರಿಂದ ಚಿಲ್ಲರೆ ಹಾಗೂ ಸಗಟು ಗ್ರಾಹಕರ ದರಗಳಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ತಿಂಗಳ 12ರಂದು ಸರ್ಕಾರ ತಾತ್ಕಾಲಿಕ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿತ್ತು. ಅದರಂತೆ, ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಪ್ರತಿಯೊಬ್ಬ ಗ್ರಾಹಕ ಅಥವಾ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ವಿತರಿಸುವ ಮಿತಿ ವಿಧಿಸಲಾಗಿತ್ತು. ಕೈಗಾರಿಕೆ, ವಾಣಿಜ್ಯ ಹಾಗೂ ಸಂಸ್ಥಾತ್ಮಕ ಬಳಕೆದಾರರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಡೀಸೆಲ್ ಕಾಳಬಜಾರ್, ಅಕ್ರಮ ಸಂಗ್ರಹಣೆ ಹಾಗೂ ದುರುಪಯೋಗವನ್ನು ತಡೆಯುವ ಜೊತೆಗೆ ಸಾಮಾನ್ಯ ಗ್ರಾಹಕರಿಗೆ ನಿರಂತರ ಇಂಧನ ಪೂರೈಕೆ ಖಚಿತಪಡಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಪ್ರಸ್ತುತ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ನಿಯಂತ್ರಣಗಳ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಇದರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದಂತಾಗಿದೆ.

Share This Article
Leave a Comment