ಜಗತ್ತಿನ ವಿಶ್ವಾಸಾರ್ಹ ಪಾಲುದಾರನಾಗಿ ಭಾರತ ಹೊರಹೊಮ್ಮುತ್ತಿದೆ: ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

2 Min Read
2 Min Read

ಪ್ಯಾರಿಸ್: ಭಾರತ ಇಂದು ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಜಗತ್ತಿನಲ್ಲಿ ಕೇವಲ ವ್ಯಾಪಾರವಷ್ಟೇ ಅಲ್ಲ, ವಿಶ್ವಾಸವೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಪ್ರಮುಖ ಅಂಶವಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಪ್ರತಿ ದೇಶವೂ ಸ್ಥಿರ ಪಾಲುದಾರಿಕೆ ಹಾಗೂ ವಿಶ್ವಾಸಾರ್ಹ ಪೂರೈಕೆ ಸರಪಳಿಯನ್ನು (Supply Chain) ಹುಡುಕುತ್ತಿದೆ. ದೀರ್ಘಾವಧಿಯ ಸಹಕಾರಕ್ಕೆ ನಂಬಿಕೆ ಮೂಡಿಸುವ ರಾಷ್ಟ್ರವಾಗಿ ಭಾರತ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿ ಮುಂದಿನ ಪೀಳಿಗೆಯ ಬೆಳವಣಿಗೆ, ನವೋದ್ಯಮ ಮತ್ತು ಉದ್ಯೋಗಾವಕಾಶಗಳಿಗೆ ದಾರಿಯಾಗುವ ಹಲವು ಕ್ಷೇತ್ರಗಳಲ್ಲಿ ಭಾರೀ ಹೂಡಿಕೆ ನಡೆಯುತ್ತಿದೆ. ದೇಶದ ಅಭಿವೃದ್ಧಿ ಪಯಣದಲ್ಲಿ ಇದು ಮಹತ್ವದ ಹಂತವಾಗಿದ್ದು, ಯುವಜನರ ಕನಸುಗಳು ಹೊಸ ಎತ್ತರ ತಲುಪುತ್ತಿವೆ ಎಂದು ಅವರು ಹೇಳಿದರು.

ಎವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ವಿಶ್ವಾಸದ ಆಧಾರದ ಮೇಲೆ ಜಾಗತಿಕ ಸಹಭಾಗಿತ್ವ ಅಗತ್ಯವೆಂದು ಭಾರತ ಒತ್ತಿ ಹೇಳಿದೆ ಎಂದು ಪ್ರಧಾನಿ ತಿಳಿಸಿದರು. ಜಾಗತಿಕ ಆಡಳಿತ ವ್ಯವಸ್ಥೆ ಎಲ್ಲರನ್ನು ಒಳಗೊಂಡಾಗ ಮಾತ್ರ ಪರಿಣಾಮಕಾರಿ ಆಗುತ್ತದೆ. ಬೆಳವಣಿಗೆ ಎಲ್ಲರಿಗೂ ತಲುಪಿದಾಗ ಮಾತ್ರ ಅದು ಶಾಶ್ವತವಾಗಿರುತ್ತದೆ ಹಾಗೂ ತಂತ್ರಜ್ಞಾನ ವಿಶ್ವಾಸಾರ್ಹವಾಗಿದ್ದಾಗ ಮಾತ್ರ ಮಾನವಕುಲಕ್ಕೆ ನಿಜವಾದ ಪ್ರಯೋಜನ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮತ್ತು ಸವಾಲುಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಭಾರತ–ಫ್ರಾನ್ಸ್ ಸಂಬಂಧಗಳು ವಿಶ್ವಾಸ, ಸ್ಥಿರತೆ ಮತ್ತು ಸಹಕಾರದ ಬಲಿಷ್ಠ ಸ್ತಂಭವಾಗಿ ಪರಿಣಮಿಸಿವೆ ಎಂದು ಪ್ರಧಾನಿ ಹೇಳಿದರು. ಎರಡೂ ರಾಷ್ಟ್ರಗಳು ತಮ್ಮ ಸಂಬಂಧವನ್ನು ‘ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ’ (Special Global Strategic Partnership) ಮಟ್ಟಕ್ಕೆ ಏರಿಸಿವೆ ಎಂದು ಅವರು ನೆನಪಿಸಿದರು.

ಮುಂದಿನ ವರ್ಷ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ‘ತ್ರಿಶ್ನಾ’ (TRISHNA) ಉಪಗ್ರಹವನ್ನು ಉಡಾವಣೆ ಮಾಡಲಿದ್ದು, ಇದು ಜಾಗತಿಕ ಮಟ್ಟದಲ್ಲಿ ನೀರು ಮತ್ತು ಆಹಾರ ಭದ್ರತೆಯನ್ನು ಬಲಪಡಿಸಲು ನೆರವಾಗಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಕಳೆದ 12 ವರ್ಷಗಳಲ್ಲಿ ಭಾರತ ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಐತಿಹಾಸಿಕ ಪರಿವರ್ತನೆಯನ್ನು ಕಂಡಿದೆ. ಅಭಿವೃದ್ಧಿಯ ಜೊತೆಗೆ ಜನರ ಸಬಲೀಕರಣ ಮತ್ತು ಜೀವನಮಟ್ಟದ ಸುಧಾರಣೆಯೂ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯದವರು ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಿದರು. “ಬೊಂಜೂರ್ ಮೋದಿ”, “ಭಾರತ್ ಮಾತಾ ಕೀ ಜೈ” ಹಾಗೂ “ಮೋದಿ, ಮೋದಿ” ಘೋಷಣೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

Share This Article
Leave a Comment