ಎವಿಯನ್ (ಫ್ರಾನ್ಸ್): ಫ್ರಾನ್ಸ್‌ನ ಸುಂದರ ನಗರ ಎವಿಯನ್‌ನಲ್ಲಿ ಇಂದು 52ನೇ ಜಿ7 ಶೃಂಗಸಭೆ ಆರಂಭವಾಗುತ್ತಿದ್ದು, ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ನಡುವೆ ವಿಶ್ವದ ಪ್ರಮುಖ ನಾಯಕರು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ.
ಈ ಬಾರಿಯ ಶೃಂಗಸಭೆ ಪಶ್ಚಿಮ ಏಷ್ಯಾದಲ್ಲಿ ಮಹತ್ವದ ಬೆಳವಣಿಗೆಯೊಂದರ ಹಿನ್ನೆಲೆಯಲ್ಲೇ ನಡೆಯುತ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ 107 ದಿನಗಳ ಸಂಘರ್ಷಕ್ಕೆ ಅಂತ್ಯ ಹಾಡುವ ಶಾಂತಿ ಒಪ್ಪಂದ ಅಂತಿಮಗೊಂಡಿದ್ದು, ಜಾಗತಿಕ ತೈಲ ಸರಬರಾಜಿನ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿ ಪುನರಾರಂಭಕ್ಕೆ ದಾರಿ ತೆರೆದಿದೆ.
ಈ ಬೆಳವಣಿಗೆಯನ್ನು ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಇಟಲಿ ಸೇರಿದಂತೆ ಜಿ7 ರಾಷ್ಟ್ರಗಳ ನಾಯಕರು ಸ್ವಾಗತಿಸಿದ್ದಾರೆ. ಜಂಟಿ ಪ್ರಕಟಣೆಯಲ್ಲಿ ಹೋರ್ಮುಜ್ ಜಲಸಂಧಿಯನ್ನು ಯಾವುದೇ ಷರತ್ತುಗಳಿಲ್ಲದೆ ಹಾಗೂ ನಿರ್ಬಂಧವಿಲ್ಲದ ನೌಕಾಯಾನಕ್ಕೆ ತೆರೆಯುವುದು ಅತ್ಯಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಶೃಂಗಸಭೆಯ ಹಿನ್ನೆಲೆಯಲ್ಲಿ ಎವಿಯನ್, ಜಿನೀವಾ ಹಾಗೂ ಲೇಕ್ ಜಿನೀವಾ ಪ್ರದೇಶಗಳನ್ನು ಕಠಿಣ ಭದ್ರತಾ ವಲಯಗಳಾಗಿ ಪರಿವರ್ತಿಸಲಾಗಿದೆ. ಸಭೆ ನಡೆಯುವ ಪ್ರದೇಶವನ್ನು ‘ರೆಡ್ ಝೋನ್’ ಮತ್ತು ‘ಬ್ಲೂ ಝೋನ್’ ಎಂದು ವಿಭಜಿಸಲಾಗಿದ್ದು, ಕ್ಯೂಆರ್ ಕೋಡ್ ಆಧಾರಿತ ಪ್ರವೇಶ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಜಿ7 ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ, ಇಟಲಿ ಹಾಗೂ ಜಪಾನ್ ನಾಯಕರನ್ನು ಅಧಿಕೃತವಾಗಿ ಸ್ವಾಗತಿಸಲಿದ್ದಾರೆ. ಜೊತೆಗೆ ಯುರೋಪಿಯನ್ ಕೌನ್ಸಿಲ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಭಾರತ, ಬ್ರೆಜಿಲ್, ದಕ್ಷಿಣ ಕೊರಿಯಾ, ಕೀನ್ಯಾ ಹಾಗೂ ಈಜಿಪ್ಟ್ ರಾಷ್ಟ್ರಗಳನ್ನು ಪಾಲುದಾರ ರಾಷ್ಟ್ರಗಳಾಗಿ ಆಹ್ವಾನಿಸಲಾಗಿದೆ. ಉಕ್ರೇನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೂ ವಿಶೇಷ ಆಹ್ವಾನ ನೀಡಲಾಗಿದೆ.
ಈ ವರ್ಷದ ಫ್ರೆಂಚ್ ಅಧ್ಯಕ್ಷತೆಯ ಜಿ7 ಶೃಂಗಸಭೆಯ ಪ್ರಮುಖ ಆದ್ಯತೆಗಳಲ್ಲಿ ಜಾಗತಿಕ ಆರ್ಥಿಕ ಅಸಮತೋಲನ ಕಡಿತ, ಸಮಾನ ಬೆಳವಣಿಗೆಗೆ ಉತ್ತೇಜನ, ಅಂತರರಾಷ್ಟ್ರೀಯ ಸಹಭಾಗಿತ್ವ ಬಲಪಡಿಸುವುದು, ಪ್ರಮುಖ ಖನಿಜ ಸರಪಳಿಗಳ ಭದ್ರತೆ, ಆನ್‌ಲೈನ್‌ನಲ್ಲಿ ಮಕ್ಕಳ ರಕ್ಷಣೆ ಹಾಗೂ ಜಾಗತಿಕ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಎವಿಯನ್‌ಗೆ ಆಗಮಿಸಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಅವರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಭಾರತವು ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ಇದು 13ನೇ ಬಾರಿ. ಅಲ್ಲದೆ ಪ್ರಧಾನಿ ಮೋದಿ ಸತತ ಏಳನೇ ಬಾರಿ ಈ ಪ್ರತಿಷ್ಠಿತ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಜಾಗತಿಕ ಶಾಂತಿ, ಭದ್ರತೆ, ಅಭಿವೃದ್ಧಿ ಹಾಗೂ ಪರಿಸರ ಸುಸ್ಥಿರತೆ ಕುರಿತ ವಿಚಾರಗಳಲ್ಲಿ ಭಾರತದ ಪಾತ್ರಕ್ಕೆ ವಿಶ್ವದ ಮಾನ್ಯತೆ ಹೆಚ್ಚುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ.
ಜಾಗತಿಕ ದಕ್ಷಿಣ ರಾಷ್ಟ್ರಗಳ ಧ್ವನಿಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಬಲವಾಗಿ ಪ್ರತಿನಿಧಿಸಲು ಈ ಶೃಂಗಸಭೆ ಪ್ರಧಾನಿ ಮೋದಿ ಅವರಿಗೆ ಮಹತ್ವದ ಅವಕಾಶ ಒದಗಿಸಲಿದೆ.


